ಅರ್ಥವ್ಯವಸ್ಥೆಯ ಚೇತರಿಕೆಗೆ 60 ಲಕ್ಷ ಕೋಟಿ ವಿದೇಶಿ ಹೂಡಿಕೆಯ ಅಗತ್ಯವಿದೆ: ನಿತಿನ್ ಗಡ್ಕರಿ
ಹೊಸದಿಲ್ಲಿ, ಜು.2: ಕೊರೋನ ವೈರಸ್ನಿಂದ ಕಂಗೆಟ್ಟಿರುವ ದೇಶದ ಅರ್ಥವ್ಯವಸ್ಥೆಗೆ ಚೇತರಿಕೆ ನೀಡಲು ಭಾರತಕ್ಕೆ 50ರಿಂದ 60 ಲಕ್ಷ ಕೋಟಿ ರೂ.ಯಷ್ಟು ವಿದೇಶಿ ನೇರ ಹೂಡಿಕೆ(ಎಫ್ಡಿಐ)ಯ ಅಗತ್ಯವಿದ್ದು ಮೂಲಸೌಕರ್ಯ ಯೋಜನೆ ಹಾಗೂ ಎಂಎಸ್ಎಂಇ ಕ್ಷೇತ್ರಗಳಲ್ಲಿ ಈ ಹೂಡಿಕೆ ಸಾಧ್ಯವಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಈಗಿನ ಸಂದರ್ಭದಲ್ಲಿ ಎಫ್ಡಿಐಯ ಅಗತ್ಯ ಹೆಚ್ಚಿದೆ. ಮಾರುಕಟ್ಟೆಗೆ ಹೆಚ್ಚಿನ ನಿಧಿ ಹರಿದು ಬರಬೇಕಿದೆ . ಆರ್ಥಿಕ ಸಂಪನ್ಮೂಲವಿಲ್ಲದೆ ಅರ್ಥವ್ಯವಸ್ಥೆಯ ಚಕ್ರಕ್ಕೆ ವೇಗ ದೊರಕುವುದಿಲ್ಲ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಭೂಸಾರಿಗೆ, ಹೆದ್ದಾರಿ ಮತ್ತು ಎಂಎಸ್ಎಂಇ ಇಲಾಖೆಯ ಸಚಿವ ಗಡ್ಕರಿ ಹೇಳಿದ್ದಾರೆ.
ಮೂಲಸೌಕರ್ಯ ಕ್ಷೇತ್ರದಲ್ಲಿ ಬರುವ ಹೆದ್ದಾರಿ, ವಿಮಾನ ನಿಲ್ದಾಣ, ಒಳನಾಡಿನ ಜಲಮಾರ್ಗಗಳು, ರೈಲ್ವೇ, ಲಾಜಿಸ್ಟಿಕ್ಸ್(ಸೇನಾ ಸಂಚಲನಶಾಸ್ತ್ರ) ಪಾರ್ಕ್ಗಳು, ಬ್ರಾಡ್ಗೇಜ್ ಮತ್ತು ಮೆಟ್ರೋ, ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್ಎಂಇ) ಸಂಸ್ಥೆಗಳು ಭಾರೀ ಪ್ರಮಾಣದಲ್ಲಿ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಬಹುದು. ಕೆಲವು ಎಂಎಸ್ಎಂಇಗಳು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಆಗಿವೆ. ಇಂತಹ ಎಂಎಸ್ಎಂಇಗಳ 3 ವರ್ಷದ ವ್ಯವಹಾರ, ಜಿಎಸ್ಟಿ ಮತ್ತು ಐಟಿ ದಾಖಲೆಯನ್ನು ಪರಿಗಣಿಸಿ ಹೂಡಿಕೆ ಮಾಡುವಂತೆ ದುಬೈ ಹಾಗೂ ಅಮೆರಿಕದ ಹೂಡಿಕೆದಾರರನ್ನು ಆಹ್ವಾನಿಸಿದ್ದೇವೆ. ಈ ಸಂಸ್ಥೆಗಳು ರಫ್ತು ಕೂಡಾ ಮಾಡುವುದರಿಂದ ಹೂಡಿಕೆಗೆ ಹೆಚ್ಚಿನ ಲಾಭ ದೊರಕಲಿದೆ ಎಂದವರು ಹೇಳಿದ್ದಾರೆ.
ಆಮದಿನ ಮೇಲಿನ ಅವಲಂಬನೆ ಕಡಿಮೆಗೊಳಿಸಿ ರಫ್ತು ಹೆಚ್ಚಿಸಬೇಕು ಎಂಬ ಪ್ರಧಾನಿ ಮೋದಿಯವರ ಆಶಯದಲ್ಲಿ ಮೂಲಸೌಕರ್ಯ ಕ್ಷೇತ್ರ ಹೆಚ್ಚಿನ ಪಾತ್ರ ವಹಿಸಬೇಕಿದೆ. ಈಗ ಇಡೀ ವಿಶ್ವವೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದು ಪರಿಸ್ಥಿತಿ ಗಂಭೀರವಾಗಿದೆ. ಸರಕಾರಿ-ಖಾಸಗಿ ಸಹಭಾಗಿತ್ವ ಹೆಚ್ಚಿನ ನಿಧಿ ಸಂಗ್ರಹಕ್ಕೆ ನೆರವಾಗಲಿದ್ದು ಇದರಿಂದ ಆರ್ಥಿಕತೆಗೆ ಉತ್ತೇಜನ ದೊರಕುವ ಜೊತೆಗೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ. 1 ಲಕ್ಷ ಕೋಟಿ ವೆಚ್ಚದ ದಿಲ್ಲಿ-ಮುಂಬೈ ಎಕ್ಸ್ಪ್ರೆಸ್ ಹೆದ್ದಾರಿ ಸಹಿತ 22 ಹಸಿರು ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ. ದಿಲ್ಲಿ-ಮುಂಬೈ ಎಕ್ಸ್ಪ್ರೆಸ್ ಹೆದ್ದಾರಿ ಹಾದು ಹೋಗಲಿರುವ ಪ್ರದೇಶದಲ್ಲಿರುವ ಸುಮಾರು 1.5 ಲಕ್ಷ ಚರ್ಮದ ಕೆಲಸಗಾರರನ್ನು ಥಾಣೆಯಲ್ಲಿ ಹೊಸದಾಗಿ ನಿರ್ಮಿಸಲಾಗುವ ಅತ್ಯಾಧುನಿಕ ಕಾಲೊನಿಗೆ ಸ್ಥಳಾಂತರಿಸುವ ಬಗ್ಗೆ ಮಹಾರಾಷ್ಟ್ರ ಸರಕಾರದೊಂದಿಗೆ ಮಾತುಕತೆ ಮುಂದುವರಿದಿದೆ ಎಂದು ಗಡ್ಕರಿ ಹೇಳಿದ್ದಾರೆ.