ಜೂನ್‌ನಲ್ಲಿ ಎನ್‌ಸಿಡಬ್ಲ್ಯುಗೆ 2,043 ದೂರುಗಳು ಸಲ್ಲಿಕೆ
ಹೊಸದಿಲ್ಲಿ,ಜು.3: ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು)ವು ಜೂನ್ ತಿಂಗಳಿನಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳ 2,043 ದೂರುಗಳನ್ನು ಸ್ವೀಕರಿಸಿದ್ದು,ಇದು ಕಳೆದ ಎಂಟು ತಿಂಗಳುಗಳಲ್ಲಿ ದಾಖಲೆಯ ಸಂಖ್ಯೆಯಾಗಿದೆ.
ಇದಕ್ಕೂ ಮುನ್ನ ಅತ್ಯಧಿಕ ದೂರುಗಳು (2,379) ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ದಾಖಲಾಗಿದ್ದವು. ಆಯೋಗದ ಅಂಕಿಅಂಶಗಳಂತೆ ಜೂನ್‌ನಲ್ಲಿ ದಾಖಲಾಗಿರುವ ದೂರುಗಳ ಪೈಕಿ 452 ಕೌಟುಂಬಿಕ ಹಿಂಸೆಗೆ ಮತ್ತು 603 ಮಾನಸಿಕ ಮತ್ತು ಭಾವನಾತ್ಮಕ ಕಿರುಕುಳಗಳಿಗೆ ಸಂಬಂಧಿಸಿವೆ. ಇತರ ದೂರುಗಳು ವರದಕ್ಷಿಣೆ ಕಿರುಕುಳ, ಮಹಿಳೆಯರಿಗೆ ಲೈಂಗಿಕ ಕಿರುಕುಳ, ಮಹಿಳೆಯರ ದೂರುಗಳ ಬಗ್ಗೆ ಪೊಲೀಸರಲ್ಲಿ ಸಂವೇದನೆಯ ಕೊರತೆ, ಸೈಬರ್ ಅಪರಾಧಗಳು,ಅತ್ಯಾಚಾರ ಮತ್ತು ಅತ್ಯಾಚಾರಕ್ಕೆ ಯತ್ನ,ವರದಕ್ಷಿಣೆ ಸಾವು ಇತ್ಯಾದಿಗಳಿಗೆ ಸಂಬಂಧಿಸಿವೆ.
‘ಆಯೋಗವು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದು,ದೂರುಗಳ ಸಂಖ್ಯೆ ಹೆಚ್ಚಲು ಇದು ಕಾರಣವಾಗಿದೆ. ನಾವೀಗ ದೂರುಗಳನ್ನು ದಾಖಲಿಸಲು ವಾಟ್ಸ್ ಆ್ಯಪ್ ನಂಬರ್ ಅನ್ನೂ ಹೊಂದಿದ್ದೇವೆ ’ಎಂದು ಎನ್‌ಸಿಡಬ್ಲು ಅಧ್ಯಕ್ಷೆ ರೇಖಾ ಶರ್ಮಾ ತಿಳಿಸಿದರು.
ಮಹಿಳೆಯರ ಹಿತ ಮತ್ತು ಸಬಲೀಕರಣಕ್ಕಾಗಿ ಆಯೋಗವು ಶ್ರಮಿಸುತ್ತಿದೆ. ಅವರು ಯಾವುದೇ ದಿನ ಯಾವುದೇ ಸಮಯದಲ್ಲಿಯೂ ಆಯೋಗವನ್ನು ಸಂಪರ್ಕಿಸಬಹುದು ಎಂದರು. ಆಯೋಗದ ಅಂಕಿಅಂಶಗಳಂತೆ ಈ ವರ್ಷದ ಜನವರಿಯಲ್ಲಿ 1,462,ಫೆಬ್ರವರಿಯಲ್ಲಿ 1424,ಮಾರ್ಚ್‌ನಲ್ಲಿ 1,347,ಎಪ್ರಿಲ್‌ನಲ್ಲಿ 800 ಮತ್ತು ಮೇ ತಿಂಗಳಿನಲ್ಲಿ 1,500 ದೂರುಗಳು ದಾಖಲಾಗಿದ್ದವು.