ದಯವಿಟ್ಟು ರಾಜೀನಾಮೆ ನೀಡಿ, ಇಡೀ ರಾಜ್ಯದ ಹೊಣೆಯನ್ನು ನಾವು ಹೊರುತ್ತೇವೆ: ಸಿದ್ದರಾಮಯ್ಯ ಸವಾಲು

ಬೆಂಗಳೂರು, ಜು. 4: `ಕೊರೋನ ಚಿಕಿತ್ಸೆಯಲ್ಲಿನ ಅವ್ಯವಹಾರದ ಆರೋಪಕ್ಕೆ ಒಬ್ಬ ಸಚಿವರು ಜತೆಯಲ್ಲಿ ಪ್ರವಾಸಕ್ಕೆ ಕರೆದಿದ್ದಾರೆ, ಇನ್ನೊಬ್ಬರು ಆಸ್ಪತ್ರೆಯ ಹೊಣೆ ಹೊರಲು ಹೇಳಿದ್ದಾರೆ. ಇಬ್ಬರಿಗೂ ಒಂದೇ ಉತ್ತರ, ದಯವಿಟ್ಟು ರಾಜೀನಾಮೆ ನೀಡಿ, ನಾವು ಪ್ರವಾಸನೂ ಮಾಡ್ತೇವೆ, ಒಂದು ಆಸ್ಪತ್ರೆಯದಲ್ಲ ಇಡೀ ರಾಜ್ಯದ ಹೊಣೆಯನ್ನೂ ಹೊರುತ್ತೇವೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ವೈದ್ಯಕೀಯ ಸಲಕರಣೆ ಖರೀದಿ ಅವ್ಯವಹಾರ ಆರೋಪ ನಿರಾಕರಿಸಿದ ಸಚಿವರಿಗೆ ಸವಾಲು ಹಾಕಿದ್ದಾರೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, "ಕೊರೋನ ಸೋಂಕು ನಿಯಂತ್ರಣ ಸಲಕರಣೆ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ, ದಾಖಲೆಗಳಿವೆ ಎಂದು ಹೇಳಿದರಷ್ಟೆ ಸಾಲದು ಅದನ್ನು ಬಿಡುಗಡೆ ಮಾಡಿ. ಮಾಹಿತಿ ಇದ್ದರೆ ಮುಚ್ಚಿಡುತ್ತಿರುವುದು ಯಾಕೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೇಳಿ. ಮಾಹಿತಿ ಕೇಳಿದ ನನ್ನ ಪತ್ರಕ್ಕೆ ಉತ್ತರಿಸಲು ಹೇಳಿ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಗೆ ತಿರುಗೇಟು ನೀಡಿದ್ದಾರೆ.
ಅತ್ಯುತ್ಸಾಹ ಬೇಡ: 'ಎಸೆಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಸರಕಾರ ನಡೆಸಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಲ್ಳಲು ಇನ್ನೂ ಹದಿನೈದು ದಿನಗಳು ಕಾಯಬೇಕಿದೆ. ಅತಿಯಾದ ಆತ್ಮವಿಶ್ವಾಸದಿಂದ ರಾಜ್ಯ ಸರಕಾರ ಎಸೆಸೆಲ್ಸಿ ಪರೀಕ್ಷೆ ನಡೆದಿದೆ ಹಾಗೂ ಸುರಕ್ಷಿತವಾಗಿ ಮುಂದಿದೆ ಎಂದು ಪ್ರಚಾರ ಮಾಡಲಾಗುತ್ತಿದೆ' ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.
ನನ್ನ ಬಲವಾದ ಸಲಹೆ ಏನೆಂದರೆ ಜೂನ್ 15ರಿಂದ ಜುಲೈ 20ರ ನಡುವೆ ಪತ್ತೆಯಾಗಿರುವ ಕೊರೋನ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ವಿದ್ಯಾರ್ಥಿಗಳು ಎಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕಿದೆ. ಆದರಿಂದ ಸೋಂಕು ಎಷ್ಟರಮಟ್ಟಿಗೆ ಹರಡಿದೆ, ಹರಡಿಲ್ಲ ಎಂಬುದು ನಿರ್ಧರಿಸಲು ಸಾಧ್ಯವಾಗುತ್ತದೆ' ಎಂದು ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಸಲಹೆ ಮಾಡಿದ್ದಾರೆ.