ಕುಂದಾಪುರ ಟ್ರಾಫಿಕ್ ಪೊಲೀಸ್ ಹೆಡ್ಕಾನ್ಸ್ಟೇಬಲ್ಗೆ ಕೊರೋನ: ಠಾಣೆ ತಾತ್ಕಾಲಿಕ ಬಂದ್
ಕುಂದಾಪುರ, ಜು.5: ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಹೆಡ್ಕಾನ್ಸ್ಟೇಬಲ್ ಒಬ್ಬರಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಇಂದು ಠಾಣೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಜ್ವರದ ಕಾರಣಕ್ಕಾಗಿ 59 ವರ್ಷ ಪ್ರಾಯದ ಹೆಡ್ಕಾನ್ಸ್ಟೇಬಲ್ ಅವರನ್ನು ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ವರದಿ ಪಾಸಿಟಿವ್ ಬಂದಿ ರುವುದರಿಂದ ಅವರನ್ನು ಕುಂದಾಪುರ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯನ್ನು ಎರಡು ದಿನಗಳ ಕಾಲ ಬಂದ್ ಮಾಡಲಾಗಿದೆ. 48 ಗಂಟೆಗಳ ಅವಧಿಯಲ್ಲಿ ಎರಡು ಬಾರಿ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಈ ಅವಧಿಯಲ್ಲಿ ಠಾಣೆಯನ್ನು ಅಲ್ಲೇ ಸಮೀಪದ ಪ್ರವಾಸಿ ಮಂದಿರದ ಒಂದು ಕೋಣೆಗೆ ಸ್ಥಳಾಂತರಿಸಲಾಗಿದೆ. ಎರಡು ದಿನಗಳು ಸಂಚಾರ ಠಾಣೆ ಅಲ್ಲೇ ಕಾರ್ಯನಿರ್ವಹಿಸಲಿದೆ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಹದಿನೈದು ದಿನಗಳ ಕಾಲ ಹೋಂ ಕ್ವಾರೆಂಟೈನ್ ವಿಧಿಸಲಾಗಿದೆ. ಅದೇ ರೀತಿ ಸೋಂಕಿತ ಹೆಡ್ಕಾನ್ಸ್ಟೇಬಲ್ ಅವರ ವಸತಿ ಗೃಹವನ್ನು ಕೂಡ ಸೀಲ್ಡೌನ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.