ಕೊರೋನ ಚಿಕಿತ್ಸೆಯಲ್ಲಿ ಮಲೇರಿಯ, ಎಚ್‌ಐವಿ ಔಷಧಿಗಳ ಬಳಕೆಯನ್ನು ನಿಲ್ಲಿಸಿದ ಡಬ್ಲ್ಯುಎಚ್‌ಒ
ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜು. 5: ಆಸ್ಪತ್ರೆಗೆ ದಾಖಲಾದ ಕೊರೋನ ವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ಎಚ್‌ಐವಿ ಔಷಧಿ ಲೊಪಿನವಿರ್/ರಿಟೊನವಿರ್ ಮಿಶ್ರಣ ಮತ್ತು ಮಲೇರಿಯ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸುವುದಕ್ಕೆ ಸಂಬಂಧಿಸಿದ ತನ್ನ ಪರೀಕ್ಷೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶನಿವಾರ ನಿಲ್ಲಿಸಿದೆ ಎಂದು ‘ಅಲ್ ಜಝೀರ’ ವರದಿ ಮಾಡಿದೆ. ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಈ ಔಷಧಿಗಳು ವಿಫಲವಾಗಿರುವುದರಿಂದ ಸಂಸ್ಥೆಯು ಈ ಕ್ರಮ ತೆಗೆದುಕೊಂಡಿದೆ.
‘‘ಈ ಪರೀಕ್ಷೆಗಳ ಮಧ್ಯಂತರ ಫಲಿತಾಂಶವು, ಕೋವಿಡ್-19 ಕಾಯಿಲೆಯೊಂದಿಗೆ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ನೀಡುವ ಸಾಮಾನ್ಯ ಮಾದರಿ ಚಿಕಿತ್ಸೆಗೂ, ಮಲೇರಿಯ ಮತ್ತು ಎಚ್‌ಐವಿ ಔಷಧಿಗಳ ಮೂಲಕ ನೀಡುವ ಚಿಕಿತ್ಸೆಗೂ ಯಾವುದೇ ವ್ಯತ್ಯಾಸವಿಲ್ಲ ಎನ್ನುವುದನ್ನು ಸೂಚಿಸಿದೆ. ಮಾದರಿ ಚಿಕಿತ್ಸೆಗೆ ಹೋಲಿಸಿದರೆ ಮಲೇರಿಯ ಮತ್ತು ಎಚ್‌ಐವಿ ಔಷಧಿಗಳು ಸಾವಿನ ಪ್ರಮಾಣವನ್ನು ಕಡಿಮೆ ಮಾಡಿಲ್ಲ. ಸಂಶೋಧಕರು ಈ ಕುರಿತ ತಮ್ಮ ಪ್ರಯೋಗಗಳನ್ನು ತಕ್ಷಣದಿಂದ ನಿಲ್ಲಿಸುತ್ತಾರೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ ಎಂದು ‘ಅಲ್ ಜಝೀರ’ ವರದಿ ಮಾಡಿದೆ.