ರಾಹುಲ್ ಗಾಂಧಿ ಸಶಸ್ತ್ರ ಪಡೆಗಳ ಶೌರ್ಯ ಪ್ರಶ್ನಿಸುತ್ತಿದ್ದಾರೆ: ಬಿಜೆಪಿ ವಾಗ್ದಾಳಿ
ಹೊಸದಿಲ್ಲಿ, ಜು.7:ಈಗಿನ ಭಾರತ-ಚೀನಾ ಗಡಿ ಬಿಕ್ಕಟ್ಟಿನ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಸೋಮವಾರ ವಾಗ್ದಾಳಿ ನಡೆಸಿದ ಬಿಜೆಪಿ, ರಾಹುಲ್ ಅವರು ರಕ್ಷಣೆಗೆ ಸಂಬಂಧಿಸಿದ ಸಂಸತ್ ಸ್ಥಾಯಿ ಸಮಿತಿಯ ಒಂದೂ ಸಭೆಯಲ್ಲಿ ಭಾಗಿಯಾಗಿಲ್ಲ. ಆದರೆ,ಸಶಸ್ತ್ರ ಪಡೆಗಳ ಶೌರ್ಯವನ್ನು ಪ್ರಶ್ನಿಸುವುದನ್ನು ಮುಂದುವರಿಸಿ ರಾಷ್ಟ್ರವನ್ನು ನಿರಾಸೆಗೊಳಿಸುತ್ತಿದ್ದಾರೆ ಎಂದು ಹೇಳಿದೆ.
ಲೋಕಸಭಾ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಮಾಜಿ ಕಾಂಗ್ರೆಸ್ ನಾಯಕ ಈ ತನಕ ಯಾವುದೇ ಸಮಿತಿ ಸಭೆಯಲ್ಲಿ ಭಾಗವಹಿಸಿಲ್ಲ.
"ರಕ್ಷಣೆಗೆ ಸಂಬಂಧಿಸಿರುವ ಒಂದೇ ಒಂದು ಸಭೆಯಲ್ಲಿ ರಾಹುಲ್ ಗಾಂಧಿ ಹಾಜರಾಗಿಲ್ಲ. ಆದರೆ, ಬೇಸರದ ವಿಚಾರವೆಂದರೆ ದೇಶವನ್ನು ನಿರಾಶೆಗೊಳಿಸುವುದನ್ನು ಮುಂದುವರಿಸಿದ್ದಾರೆ. ಸಶಸ್ತ್ರ ಪಡೆಗಳ ಶೌರ್ಯವನ್ನು ಪ್ರಶ್ನಿಸುತ್ತಿದ್ದಾರೆ.ಪ್ರತಿಪಕ್ಷ ನಾಯಕನಾಗಿ ಏನೆಲ್ಲ ಮಾಡಬಾರದೊ ಅದನ್ನೆಲ್ಲವನ್ನು ಮಾಡುತ್ತಿದ್ದಾರೆ'' ಎಂದು ಟ್ವಿಟರ್ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ವಾಗ್ದಾಳಿ ನಡೆಸಿದ್ದಾರೆ.
"ರಾಹುಲ್ ಗಾಂಧಿ ಆ ಅದ್ಭುತ ರಾಜವಂಶದ ಸಂಪ್ರದಾಯಕ್ಕೆ ಸೇರಿದವರಾಗಿದ್ದು,ಅಲ್ಲಿ ರಕ್ಷಣೆಗೆ ಸಂಬಂಧಿಸಿದಂತೆ ಸಮಿತಿಯು ಅಪ್ರಸ್ತುತವಾಗುತ್ತದೆ. ಆಯೋಗವು ಮಾತ್ರ ಕೆಲಸ ಮಾಡುತ್ತವೆ. ಸಂಸತ್ತಿನ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಅನೇಕ ಸದಸ್ಯರುಗಳನ್ನು ಕಾಂಗ್ರೆಸ್ ಹೊಂದಿದೆ. ಆದರೆ ಒಂದು ರಾಜವಂಶವು ಅಂತಹ ನಾಯಕರನ್ನು ಬೆಳೆಯಲು ಎಂದಿಗೂ ಬಿಡುವುದಿಲ್ಲ'' ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.