ದವೀಂದರ್ ಸಿಂಗ್ ಪಾಕ್ ಏಜೆಂಟ್ ಆಗಿದ್ದ: ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಿಸಿದ ಎನ್‍ಐಎ
ಜಮ್ಮು: ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ನವೀದ್ ಬಾಬು ಮತ್ತಾತನ ಇಬ್ಬರು ಸಹಚರರನ್ನು ತನ್ನ ಕಾರಿನಲ್ಲಿ ಶ್ರೀನಗರದಿಂದ ಜಮ್ಮುವಿಗೆ ಕರೆದೊಯ್ಯುತ್ತಿರುವ ವೇಳೆ ಜನವರಿಯಲ್ಲಿ ಬಂಧನಕ್ಕೀಡಾಗಿದ್ದ ಮಾಜಿ ಡಿವೈಎಸ್ಪಿ ದವೀಂದರ್ ಸಿಂಗ್ ವಿರುದ್ಧ ಜಮ್ಮುವಿನ ವಿಶೇಷ ನ್ಯಾಯಾಲಯದಲ್ಲಿ ರಾಷ್ಟ್ರೀಯ ತನಿಖಾ ಏಜನ್ಸಿ ಚಾರ್ಜ್ ಶೀಟ್ ಸಲ್ಲಿಸಿದೆ. ಆತ ಪಾಕಿಸ್ತಾನಿ ಏಜೆಂಟ್ ಆಗಿದ್ದ ಎಂದು ಆರೋಪಿಸಲಾಗಿದೆ.
ದವೀಂದರ್ ಸಿಂಗ್ ಗೆ ಇಲ್ಲಿಯ ತನಕ ಯಾರು ರಕ್ಷಣೆ ನೀಡುತ್ತಿದ್ದರು ಹಾಗೂ 2001 ಸಂಸತ್ ದಾಳಿಯಲ್ಲಿ ಆತ ವಹಿಸಿದ್ದಾನೆನ್ನಲಾದ ಪಾತ್ರದ ಕುರಿತು ಇನ್ನೂ ಏಕೆ ತನಿಖೆ ನಡೆಸಲಾಗಿಲ್ಲ ಎಂಬ ಪ್ರಶ್ನೆಯೂ ಇದೀಗ ಎದ್ದಿದೆ.
ಭಾರತದ ವಿರುದ್ಧ ಹಿಂಸಾತ್ಮಕ ಕೃತ್ಯ ನಡೆಸುವ ಉದ್ದೇಶ ಹೊಂದಿದ್ದ ಹಿಜ್ಬುಲ್ ಹಾಗೂ ಪಾಕಿಸ್ತಾನದ ಷಡ್ಯಂತ್ರವೊಂದರಲ್ಲಿ ಆರೋಪಿ ಶಾಮೀಲಾಗಿದ್ದ ಹಾಗೂ ಆತ ದಿಲ್ಲಿಯಲ್ಲಿರುವ ಪಾಕ್ ಹೈಕಮಿಷನ್ ನ ಕೆಲ ಅಧಿಕಾರಿಗಳ ಜತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿದ್ದ ಎಂದು ಆರೋಪಿಸಲಾಗಿದೆ.
ದೇಶದ ಕುರಿತಾದ ಸೂಕ್ಷ್ಮ ಮಾಹಿತಿಗಳನ್ನ ಪಡೆಯುವ ಉದ್ದೇಶದಿಂದ ಆತನನ್ನು ಪಾಕ್ ಅಧಿಕಾರಿಗಳು ಸಲಹುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ದವೀಂದರ್ ಸಹಾಯದಿಂದ ಹಲವು ಉಗ್ರ ಪ್ರಕರಣದ ಆರೋಪಿಗಳು ಶಸ್ತ್ರಾಸ್ತ್ರಗಳನ್ನು ಗಡಿಯಾಚೆಗಿಂದ ಪಡೆದಿದ್ದರು ಹಾಗೂ ನಂತರ ಇವುಗಳನ್ನು ಉಗ್ರ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು ಎಂದೂ ಚಾರ್ಜ್ ಶೀಟ್‍ನಲ್ಲಿ ಆರೋಪಿಸಲಾಗಿದೆ.
ಆರೋಪಿಯು ಹಿಜ್ಬುಲ್ ಕಮಾಂಡರ್ ನವೀದ್ ಗೆ ಕಳೆದ ವರ್ಷದ ಫೆಬ್ರವರಿಯಲ್ಲಿ ಜಮ್ಮುವಿನಲ್ಲಿ ಸಉರಕ್ಷಿತ ಮನೆಯೊಂದರ ಏರ್ಪಾಟು ಮಾಡಿದ್ದ ಎಂದೂ ಎನ್‍ಐಎ ಆರೋಪಿಸಿದೆ.