ಭವಿಷ್ಯನಿಧಿಗೆ ಸರ್ಕಾರದ ದೇಣಿಗೆ ಆಗಸ್ಟ್ ವರೆಗೆ ವಿಸ್ತರಣೆ
ಹೊಸದಿಲ್ಲಿ: ಭವಿಷ್ಯನಿಧಿ ಖಾತೆಗೆ ಉದ್ಯೋಗದಾತರು ಮತ್ತು ಉದ್ಯೋಗಿಗಳು ನೀಡಬೇಕಾದ ದೇಣಿಗೆಯನ್ನು ಆಗಸ್ಟ್ ತಿಂಗಳ ವರೆಗೆ ವಿಸ್ತರಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕಳೆದ ಮೇ ತಿಂಗಳಲ್ಲಿ ಈ ವಿಸ್ತರಣೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದರು. ಬುಧವಾರ ನಡೆದ ಸಚಿವ ಸಂಪುಟ ಸಭೆ ನಿರ್ಧಾರವನ್ನು ಸಚಿವ ಪ್ರಕಾಶ್ ಜಾವ್ಡೇಕರ್ ಘೋಷಿಸಿದರು.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಸಂಪೂರ್ಣ ಶೇಕಡ 24ನ್ನು ಸರ್ಕಾರವೇ ಪಾವತಿಸುವ ಕ್ರಮವನ್ನು ಆಗಸ್ಟ್ ವರೆಗೆ ವಿಸ್ತರಿಸುವುದರಿಂದ 3.67 ಲಕ್ಷ ಉದ್ಯೋಗದಾತರು ಮತ್ತು 72.22 ಲಕ್ಷ ಉದ್ಯೋಗಿಗಳಿಗೆ ಲಾಭವಾಗಲಿದೆ. ಪಿಎಫ್ ಬಾಕಿಯನ್ನು ಪಾವತಿಸಬೇಕಾದ ಉದ್ಯೋಗದಾತರ ಹೊರೆ ಇದರಿಂದ ಕಡಿಮೆಯಾಗುವುದು ಒಂದೆಡೆಯಾದರೆ, ಉದ್ಯೋಗಿಗಳಿಗೆ ಮನೆಗೆ ಒಯ್ಯುವ ವೇತನ ಹೆಚ್ಚಲಿದೆ ಎಂದು ವಿವರಿಸಿದರು.
ಮಾರ್ಚ್ 25ರಿಂದ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಇಪಿಎಫ್ ಖಾತೆಗಳಿಗೆ ಸರ್ಕಾರವೇ ಸಂಪೂರ್ಣ ಮೊತ್ತವನ್ನು ಪಿಎಂಜಿಕೆ ಪ್ಯಾಕೇಜ್ ಅಡಿಯಲ್ಲಿ ಪಾವತಿಸುತ್ತಿದೆ. ಆರಂಭದಲ್ಲಿ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳ ವೇತನಕ್ಕೆ ಇದನ್ನು ಘೋಷಿಸಲಾಗಿತ್ತು. ಇದೀಗ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳ ವೇತನಕ್ಕೂ ಅನ್ವಯವಾಗಲಿದೆ.