ಬದಲಾದ ಮೃತದೇಹಗಳು: ಹಿಂದೂ ಧಾರ್ಮಿಕ ವಿಧಿವಿಧಾನದಂತೆ ಮುಸ್ಲಿಂ ಮಹಿಳೆಯ ಅಂತ್ಯಕ್ರಿಯೆ!
ಏಮ್ಸ್ ಆಸ್ಪತ್ರೆ ಸಿಬ್ಬಂದಿಯ ಎಡವಟ್ಟು
ಹೊಸದಿಲ್ಲಿ: ಆಘಾತಕಾರಿ ಘಟನೆಯೊಂದರಲ್ಲಿ ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಏಮ್ಸ್ ನಲ್ಲಿ ನಡೆದ ಎಡವಟ್ಟಿನಿಂದ ಮೃತದೇಹಗಳು ಅದಲು-ಬದಲಾಗಿರುವುದು ಬೆಳಕಿಗೆ ಬಂದಿದೆ.
ಗಾಝಿಯಾಬಾದ್ ನ ಕೈಲಾಶ್ ನಗರದ ನಿವಾಸಿ 52 ವರ್ಷದ ಕುಸುಮಲತಾ ಅನಾರೋಗ್ಯದ ಕಾರಣ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ರವಿವಾರ ಸಂಜೆ ಅವರು ಮೃತಪಟ್ಟಿದ್ದು, ಮರುದಿನ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು. ಅವರ ಕೊರೋನ ಪರೀಕ್ಷೆಗಳನ್ನು ನಡೆಸಿದ್ದು, ಪಾಸಿಟಿವ್ ಫಲಿತಾಂಶ ಬಂದಿತ್ತು. ಕುಟುಂಬಸ್ಥರು ರುದ್ರಭೂಮಿಯಲ್ಲಿ ಹಿಂದೂ ವಿಧಿ ವಿಧಾನಗಳಂತೆ ಅಂತ್ಯಕ್ರಿಯೆ ನಡೆಸಿದರು.
ಮಂಗಳವಾರ ಕುಸುಮಲತಾ ಅವರ ಮನೆಯವರಿಗೆ ಏಮ್ಸ್ ನಿಂದ ಕರೆ ಬಂದಿದ್ದು, ನಿಮಗೆ ಬೇರೆ ರೋಗಿಯೊಬ್ಬರ ಮೃತದೇಹವನ್ನು ನೀಡಲಾಗಿತ್ತು. ಕುಸುಮಲತಾ ಅವರ ಮೃತದೇಹ ಆಸ್ಪತ್ರೆಯಲ್ಲೇ ಇದೆ ಎಂದು ಹೇಳಲಾಗಿತ್ತು. ಆಘಾತಗೊಂಡ ಮನೆಯವರು ಆಸ್ಪತ್ರೆಗೆ ಹೋಗಿ ಮೃತದೇಹ ಪಡೆದು ಅಂತ್ಯಕ್ರಿಯೆ ನಡೆಸಿದರು.
ಇದಕ್ಕೂ ಮೊದಲು ನೀಡಿದ್ದ ಮೃತದೇಹ ಬರೇಲಿಯ ನಿವಾಸಿ ಅಂಜುಮ್ ಅವರದ್ದು ಎಂದು ಏಮ್ಸ್ ಸಿಬ್ಬಂದಿ ಮಾಹಿತಿ ನೀಡಿದರು.
ಅಂಜುಮ್ ಅವರನ್ನು ಜುಲೈ 4ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಕೊರೋನ ಫಲಿತಾಂಶ ಪಾಸಿಟಿವ್ ಬಂದಿತ್ತು. ಜುಲೈ 6ರಂದು ಅವರು ಮೃತಪಟ್ಟರು. ಮಧ್ಯಾಹ್ನ 2 ಗಂಟೆಯ ವೇಳೆಗೆ ಕುಟುಂಬಸ್ಥರಿಗೆ ಈ ಸುದ್ದಿಯನ್ನು ತಿಳಿಸಲಾಗಿತ್ತು. ಕುಟುಂಬಸ್ಥರು ಅಂತ್ಯಕ್ರಿಯೆ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದರು. ಆದರೆ ಕೊನೆಗೆ ಇದು ಅಂಜುಮ್ ಮೃತದೇಹವಲ್ಲ ಎನ್ನುವುದು ತಿಳಿದುಬಂದು ಏಮ್ಸ್ ಗೆ ಮಾಹಿತಿ ನೀಡಿದ್ದರು. ಕುಸುಮಲತಾ ಅವರ ಕುಟುಂಬಕ್ಕೆ ಹಸ್ತಾಂತರಿಸಿದ್ದು ಅಂಜುಮ್ ಅವರ ಮೃತದೇಹ ಮತ್ತು ಅದನ್ನು ಹಿಂದೂ ವಿಧಿವಿಧಾನದಂತೆ ಅಂತ್ಯಕ್ರಿಯೆ ನಡೆಸಲಾಗಿದೆ ಎನ್ನುವುದು ನಂತರ ತಿಳಿದುಬಂದಿತ್ತು.
ಘಟನೆಗೆ ಸಂಬಂಧಿಸಿ ಶವಾಗಾರದ ಇಬ್ಬರು ಸಿಬ್ಬಂದಿಯನ್ನು ಏಮ್ಸ್ ವಜಾಗೊಳಿಸಿದೆ. ಈ ಬಗ್ಗೆ ದಿಲ್ಲಿ ಪೊಲೀಸರಿಗೆ ದೂರು ನೀಡಲಾಗಿದ್ದು, ಎಫ್ ಐಆರ್ ದಾಖಲಾಗಿಲ್ಲ.