ಗರ್ಭಿಣಿ ಆನೆಯ ಸಾವಿನ ಪ್ರಕರಣ: ಕೇಂದ್ರ, ಕೇರಳ ಸರಕಾರಕ್ಕೆ ಸುಪ್ರೀಂ ನೋಟಿಸ್
ಹೊಸದಿಲ್ಲಿ, ಜು.10: ಕೇರಳದ ಪಾಲಕ್ಕಾಡ್ ನಲ್ಲಿ ಗರ್ಭಿಣಿ ಆನೆಯೊಂದು ಆಹಾರ ಮಿಶ್ರಿತ ಪಟಾಕಿ ತಿಂದು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ, ಕೇರಳ ಸರಕಾರ ಹಾಗೂ ಇತರ 12 ರಾಜ್ಯಗಳಿಗೆ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ. ಪ್ರಾಣಿಗಳನ್ನು ಹತ್ಯೆ ಮಾಡಲು ಸ್ಫೋಟಕ ಬಳಸುವುದನ್ನು ಬರ್ಬರ, ಅನಾಗರಿಕ ಕೃತ್ಯ ಎಂದು ಘೋಷಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ ಈ ನೋಟಿಸ್ ಜಾರಿಗೊಳಿಸಿದೆ.
ಪ್ರಾಣಿಗಳ ಹತ್ಯೆಗೆ ಬೋನು ಹಾಗೂ ಸ್ಫೋಟಕ ವಸ್ತುಗಳನ್ನು ಬಳಸುವುದು ಅಕ್ರಮ ಕೃತ್ಯವಾಗಿದ್ದು ಸಂವಿಧಾನದ 14 ಮತ್ತು 21ನೇ ಪರಿಚ್ಛೇದದಡಿಯ ಜೀವಿಸುವ ಮತ್ತು ಘನತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಇಂತಹ ಅಪರಾಧಗಳಿಗೆ ಇನ್ನಷ್ಟು ಕಠಿಣ ಶಿಕ್ಷೆ ವಿಧಿಸಲು ಅನುಕೂಲವಾಗುವಂತೆ 1960ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಚಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಮಾಧ್ಯಮಗಳು ಮತ್ತು ಅಧಿಕಾರಿಗಳು ಇಂತಹ ಸುದ್ಧಿಗಳನ್ನು ಎಚ್ಚರಿಕೆಯಿಂದ ಮತ್ತು ಸೂಕ್ಷ್ಮವಾಗಿ ನಿರ್ವಹಿಸಲು ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು. ಸರಕಾರದ ಕಡೆಯಿಂದ ಇಂತಹ ಮಾಹಿತಿ ಮತ್ತು ಸೂಚನೆಯ ಕೊರತೆಯಿಂದಾಗಿ, ಹಲವು ಚಾನೆಲ್ಗಳು ಮತ್ತು ಟ್ವಿಟರ್ನಂತಹ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯದ ಬಗ್ಗೆ ‘ಮಾಧ್ಯಮ ವಿಚಾರಣೆ’ ನಡೆದಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.