ಸಹೋದ್ಯೋಗಿಗೆ ಲೈಂಗಿಕ ಕಿರುಕುಳ: ಒಡಿಶಾದ ಆಯುಷ್ ಸಚಿವಾಲಯದ ಉನ್ನತ ಅಧಿಕಾರಿ ಬಂಧನ

ಭುವನೇಶ್ವರ: ಆಯುರ್ವೇದ, ಯೋಗ, ನ್ಯಾಚುರೋಪಥಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ ಸಚಿವಾಲಯ ಅಥವಾ ಆಯುಷ್ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರನ್ನು ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ.
ಬಿಭು ಪ್ರಸಾದ್ ಸಾರಂಗಿ, ಒಡಿಶಾ ಆಡಳಿತಾತ್ಮಕ ಸೇವೆಯ ಹಿರಿಯ ಅಧಿಕಾರಿಯಾಗಿದ್ದು, ಮಹಿಳಾ ಸಹೋದ್ಯೋಗಿಗೆ ಅಶ್ಲೀಲ ಸಂದೇಶ ಮತ್ತು ವಿಡಿಯೊ ಕಳುಹಿಸುತ್ತಿದ್ದರು ಎನ್ನಲಾಗಿದೆ. ಸಾರಂಗಿ ಲೈಂಗಿಕ ಸಂಬಂಧಕ್ಕೂ ಒತ್ತಾಯಿಸಿದ್ದರು ಎಂದು ಮಹಿಳಾ ಉದ್ಯೋಗಿ ದೂರು ನೀಡಿದ್ದರು.
ಭಾರತೀಯ ದಂಡಸಂಹಿತೆಯ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಬಲವಂತಪಡಿಸುವುದು) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 (ಎಲೆಕ್ಟ್ರಾನಿಕ್ ವಿಧಾನದಲ್ಲಿ ಅಶ್ಲೀಲ ಸಂದೇಶ ರವಾನೆ) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಸಾರಂಗಿ ವಿರುದ್ಧ ಪುರಾವೆಗಳನ್ನು ಪೊಲೀಸರಿಗೆ ಜುಲೈ 6ರಂದು ಮಹಿಳೆ ನೀಡಿದ್ದು, ಇದರ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿತ್ತು.
“ಸೂಕ್ತ ತನಿಖೆ ಮತ್ತು ಆರೋಪದ ದೃಢೀಕರಣ ಮಾಡಿದ ಬಳಿಕ ಅವರ ವಿರುದ್ಧ ಸಾಕಷ್ಟು ಪುರಾವೆಗಳು ಲಭ್ಯವಾಗಿವೆ” ಎಂದು ಭುವನೇಶ್ವರ ಹೆಚ್ಚುವರಿ ಡಿಸಿಪಿ ಅನೂಪ್ ಕುಮಾರ್ ಸಾಹೂ ವಿವರಿಸಿದ್ದಾರೆ.
ಸಾರಂಗಿ ಆರೋಪ ನಿರಾಕರಿಸಿದ್ದು, ಪ್ರತಿಯಾಗಿ ದೂರು ಸಲ್ಲಿಸಿದ್ದಾರೆ. “ನನ್ನ ವಿರುದ್ಧದ ಆರೋಪಗಳು ಸುಳ್ಳು ಹಾಗೂ ದುರುದ್ದೇಶಪೂರ್ವಕ” ಎಂದು ಅವರು ಹೇಳಿದ್ದಾರೆ. “ಮಹಿಳೆ ತನ್ನ ಸ್ನೇಹಿತನ ಜತೆ ಸೇರಿ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ” ಎನ್ನುವುದು ಅವರ ವಾದ. ಮಹಿಳೆಯ ನೇಮಕಾತಿ ಅಕ್ರಮ ಎನ್ನುವುದು ಕಂಡುಬಂದಿದ್ದು, ಆಕೆಯನ್ನು ವಜಾ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.