‘ರೇವಾ ಸೋಲಾರ್ ಪಾರ್ಕ್ ಏಷ್ಯಾದಲ್ಲಿಯೇ ಅತಿ ದೊಡ್ಡ ಘಟಕ’ ಎಂಬ ಕೇಂದ್ರದ ಹೇಳಿಕೆಗೆ ಡಿಕೆಶಿ ತಿರುಗೇಟು
“2,000 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ಕರ್ನಾಟಕದಲ್ಲಿದೆ”
ಬೆಂಗಳೂರು: ಮಧ್ಯ ಪ್ರದೇಶದ ರೇವಾ ಎಂಬಲ್ಲಿ ಶುಕ್ರವಾರ ಉದ್ಘಾಟನೆಗೊಂಡ 750 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಸೋಲಾರ್ ಪಾರ್ಕ್ ಆಗಿದೆ ಎಂಬ ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್ ಅವರ ಹೇಳಿಕೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಕರ್ನಾಟಕದ ಪಾವಗಡದಲ್ಲಿ 2018ರಿಂದ 2,000 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ಕಾರ್ಯಾಚರಿಸುತ್ತಿರುವಾಗ ರೇವಾದ ಸೋಲಾರ್ ಪಾರ್ಕ್ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದೆಂದು ಹೇಗೆ ಹೇಳಲು ಸಾಧ್ಯ ಎಂಬುದು ಶಿವಕುಮಾರ್ ಅವರ ಪ್ರಶ್ನೆಯಾಗಿದೆ.
“ಬಿಜೆಪಿ ಕೇಂದ್ರ ಸರಕಾರ ತಾನು ಮಧ್ಯ ಪ್ರದೇಶದ ರೇವಾ ಎಂಬಲ್ಲಿ ಉದ್ಘಾಟಿಸಿದ 750 ಮೆವಾ ಘಟಕವನ್ನು ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಸೋಲಾರ್ ಘಟಕ ಎಂದು ಹೇಳುತ್ತಿದೆ. ಹಾಗಾದರೆ ಕೇವಲ 3 ವರ್ಷಗಳಲ್ಲಿ ಕರ್ನಾಟಕದ ಪಾವಗಡದಲ್ಲಿ ಕರ್ನಾಟಕ ಸರಕಾರ ಸ್ಥಾಪಿಸಿದ ಹಾಗೂ 2018ರಿಂದ ಕಾರ್ಯಾಚರಿಸುತ್ತಿರುವ 2000 ಮೆವಾ ಸೋಲಾರ್ ಘಟಕದ ಬಗ್ಗೆ ಏನಂತೀರಿ?'' ಎಂದು ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
``ಕರ್ನಾಟಕದ ಪಾವಗಡ ಪಾರ್ಕ್ ಬಹಳಷ್ಟು ದೊಡ್ಡದಾಗಿರುವಾಗ (2000 ಮೆವಾ) ಹಾಗೂ ಎರಡು ವರ್ಷಗಳ ಹಿಂದೆಯೇ ಉದ್ಘಾಟನೆಗೊಂಡಿರುವಾಗ ಇಂದು ಉದ್ಘಾಟನೆಗೊಂಡ ರೆವಾ ಸೋಲಾರ್ ಪಾರ್ಕ್ (750 ಮೆವಾ) ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದೆಂದು ಕೇಂದ್ರ ಸರಕಾರ ಹೇಗೆ ಹೇಳುತ್ತಿದೆ ಎಂಬುದಕ್ಕೆ ಕೇಂದ್ರ ವಿದ್ಯುತ್ ಸಚಿವರು ಉತ್ತರಿಸಬೇಕು,'' ಎಂದು ಇನ್ನೊಂದು ಟ್ವೀಟ್ನಲ್ಲಿ ಶಿವಕುಮಾರ್ ಹೇಳಿದ್ದಾರೆ.
ರೇವಾದ ಸೋಲಾರ್ ಪಾರ್ಕ್ ಅನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದ್ದರು. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಶಿವಕುಮಾರ್ ಇಂಧನ ಸಚಿವರಾಗಿದ್ದ ವೇಳೆ ಪಾವಗಡದ ಸೋಲಾರ್ ಘಟಕ ಉದ್ಘಾಟನೆಗೊಂಡಿತ್ತು. ಈ ಯೋಜನೆಗೆ ಒಂದೇ ಒಂದು ಎಕರೆ ಜಮೀನು ಸ್ವಾಧೀನಪಡಿಸಲಾಗಿಲ್ಲ, ಬದಲು ಎಲ್ಲಾ 13,000 ಎಕರೆ ಲೀಸ್ಗೆ ಪಡೆದು ಸರಕಾರ ರೈತರಿಗೆ ವಾರ್ಷಿಕ ಬಾಡಿಗೆ ತೆರುತ್ತಿದೆ ಎಂದೂ ಶಿವಕುಮಾರ್ ಹೇಳಿದ್ದಾರೆ.