ತೂತುಕುಡಿ ಘಟನೆ ಬಗ್ಗೆ ಮಾಡಿದ್ದ ವಿಡಿಯೋ ಡಿಲಿಟ್ ಮಾಡುವಂತೆ ಪೊಲೀಸರಿಂದ ಬೆದರಿಕೆ: ಸುಚಿತ್ರಾ ಆರೋಪ
ಚೆನ್ನೈ: ತೂತುಕುಡಿಯಲ್ಲಿ ಸಂಭವಿಸಿದ ತಂದೆ ಮಗನ ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿ ವಿಡಿಯೋವೊಂದನ್ನು ಮಾಡಿದ್ದ ಗಾಯಕಿ, ರೇಡಿಯೋ ಜಾಕಿ ಸುಚಿತ್ರಾ ಇದೀಗ ತಮ್ಮ ವಿಡಿಯೋವನ್ನು ಅಳಿಸಿ ಹಾಕಿದ್ದಾರೆ.
ವಿಡಿಯೋವನ್ನು ಡಿಲಿಟ್ ಮಾಡುವಂತೆ ರಾಜ್ಯದ ಪೊಲೀಸ್ ಇಲಾಖೆ ತನಗೆ ಎಚ್ಚರಿಕೆ ನೀಡಿತ್ತು ಎಂದವರು ಹೇಳಿದ್ದಾರೆ.
“ಸಿಬಿ-ಸಿಐಡಿಯಿಂದ ನನಗೆ ಕರೆ ಬಂದಿತ್ತು. ಅರಾಜಕತೆ ಸೃಷ್ಟಿಸುವ ಉದ್ದೇಶದಿಂದ ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ನಿಮ್ಮನ್ನು ಬಂಧಿಸುತ್ತೇವೆ ಎಂದು ನನ್ನನ್ನು ಬೆದರಿಸಿದರು. ಅವರು ಅದನ್ನು ಮಾಡಲು ಹೇಸುವುದಿಲ್ಲ ಎಂದು ನನ್ನ ವಕೀಲರು ಹೇಳಿದ ನಂತರ ವಿಡಿಯೋವನ್ನು ಡಿಲಿಟ್ ಮಾಡಿದ್ದೇನೆ. ದಯವಿಟ್ಟು ಈ ಪ್ರಕರಣವನ್ನು ಜನರು ಗಮನಿಸಬೇಕು” ಎಂದವರು ಟ್ವೀಟ್ ಒಂದರಲ್ಲಿ ತಿಳಿಸಿದ್ದಾರೆ.
“ವಿಡಿಯೋ ಡಿಲಿಟ್ ಮಾಡುವುದು ನನಗೆ ಮುಖ್ಯವಲ್ಲ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ನಾನು ವಿಡಿಯೋದಲ್ಲಿ ಹೇಳಿದ ಯಾವುದೇ ವಿಷಯಗಳು ಸಾಬೀತಾಗಿಲ್ಲ ಎಂದವರು ಹೇಳುತ್ತಿದ್ದಾರೆ. ನಿಜವಾದ ಮರಣೋತ್ತರ ಪರೀಕ್ಷೆ ಅತ್ಯಂತ ಅಗತ್ಯ. ಮಾಧ್ಯಮಗಳೇ ಈ ಕಾಪಿ ನಿಮಗೆ ಸಿಗುವವರೆಗೆ ವಿಶ್ರಮಿಸಬೇಡಿ” ಎಂದವರು ಇನ್ನೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.