ಲಕ್ಷ್ಮೀನಗರ ಯೋಗೀಶ್ ಪೂಜಾರಿ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ, ಬೈಕ್ ಜಪ್ತಿ
ಅನುಪ್ ಕುಂದರ್
ಮಲ್ಪೆ, ಜು.12: ತೆಂಕನಿಡಿಯೂರು ಗ್ರಾಮದ ಲಕ್ಷ್ಮೀನಗರದ ಯೋಗೀಶ್ ಪೂಜಾರಿ(26) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಬೈಲಕೆರೆಯ ಅನುಪ್ ಕುಂದರ್(38) ಬಂಧಿತ ಆರೋಪಿ. ಈತನಿಂದ ಕೃತ್ಯಕ್ಕೆ ಬಳಸಿದ ಬೈಕ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತ ಎಲೆಕ್ಟ್ರಿಶನ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಕೊಲೆ ನಡೆಸಿದ ಬಳಿಕ ಈತ ಬಾಗಲಕೋಟೆಯಲ್ಲಿ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. ಈ ಕುರಿತ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಬಾಗಲಕೋಟೆಯಲ್ಲಿ ವಶಕ್ಕೆ ಪಡೆದು, ಉಡುಪಿಗೆ ಕರೆ ತಂದಿದ್ದಾರೆ. ಬಂಧಿತನನ್ನು ಇಂದು ನ್ಯಾಯಾಧೀಶರ ನಿವಾಸದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಸುಜಿತ್ ಪಿಂಟೋ, ವಿನಯ ದೇವಾಡಿಗ, ರೋಹಿತ್ ಪಿಂಟೋ ಹಾಗೂ ಪ್ರದೀಪ್ ಪೂಜಾರಿ ಯಾನೆ ಅಣ್ಣು ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿ ಗಿರೀಶ್ಗಾಗಿ ಪೊಲೀಸರು ಶೋಧ ಕಾರ್ಯ ಮುಂದು ವರೆಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.