ಗುಜರಾತ್: ಅಂಗಡಿ ತೆರೆಯುವಾಗ ವಂದೇಮಾತರಂ, ಜನಗಣಮನ ಹಾಡಲು ವ್ಯಾಪಾರಿಗಳಿಗೆ ನಗರಾಡಳಿತ ಆದೇಶ
ಸಾಂದರ್ಭಿಕ ಚಿತ್ರ
ಅಹ್ಮದಾಬಾದ್, ಜು.12: ಗುಜರಾತ್ ನ ಸೂರತ್ ನಗರದ ಜವಳಿ ವ್ಯಾಪಾರಿಗಳು ಇನ್ನು ಮುಂದೆ ತಮ್ಮ ಅಂಗಡಿಗಳನ್ನು ತೆರೆಯುವಾಗ ‘ವಂದೇಮಾತರಂ’ ಹಾಡಬೇಕು ಹಾಗೂ ಅಂಗಡಿ ಬಾಗಿಲು ಮುಚ್ಚುವಾಗ ರಾಷ್ಟ್ರಗೀತೆ ಹಾಡಬೇಕೆಂದು ಸ್ಥಳೀಯ ನಗರಪಾಲಿಕೆಯು ಶನಿವಾರ ಸೂಚನೆ ನೀಡಿದೆಯೆಂದು ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿದೆ.
“ಅಂಗಡಿಗಳನ್ನು ತೆರೆಯುವಾಗ ವಂದೇ ಮಾತರಂ ಹಾಡುವುದು ಹಾಗೂ ಮುಚ್ಚುವಾಗ ಜನಗಣಮನ ಹಾಡುವುದು, ದೇಶದ ಜನತೆಯ ನಡುವೆ ಭಾವ್ತೈಕ್ಯವನ್ನು ಸೃಷ್ಟಿಸಲು ಹಾಗೂ ಕೊರೋನ ವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ರಣಘೋಷಣೆಯಾಗಲಿದೆ” ಎಂದು ಸೂರತ್ ಮುನ್ಸಿಪಲ್ ಆಯುಕ್ತ ಬಿ.ಎನ್.ಪಾನಿ ತಿಳಿಸಿದ್ದಾರೆ.
ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸೂರತ್ ನಲ್ಲಿ ಮುಚ್ಚುಗಡೆಯಾಗಿದ್ದ ಜವಳಿ ಅಂಗಡಿಗಳು ಈಗ ಪುನಾರಂಭಗೊಳ್ಳುತ್ತಿವೆ. ಕೊರೋನ ಹಾವಳಿಯ ಕೇಂದ್ರ ಬಿಂದುಗಳಲ್ಲೊಂದಾದ ಸೂರತ್ ನಗರದಲ್ಲಿ ಜವಳಿ ಅಂಗಡಿಗಳನ್ನು ಪುನರ್ ತೆರೆಯಲು ನಗರಾಡಳಿತವು ಹೊರತಂದಿರುವ ಮಾರ್ಗದರ್ಶಿ ಸೂತ್ರಗಳ ಒಂದು ಭಾಗ ಇದಾಗಿದೆ.
ವಂದೇಮಾತರಂ, ಜನಗಣಮನ ಹಾಡುಗಳ ಜೊತೆಗೆ ‘ಹಾರ್ಸೆ ಕೊರೋನ ಜೀತ್ಸೆ ಸೂರತ್’ (ಕೊರೋನ ಸೋಲಲಿದೆ, ಸೂರತ್ ಗೆಲ್ಲಲಿದೆ) ಹಾಗೂ ‘‘ ಏಕ್ ಲಕ್ಷ ಹಮಾರಾ ಹೈ ಕೊರೋನ ಕೊ ಹರಾನಾ ಹೈ ( ನಮಗಿರುವುದು ಒಂದೇ ಗುರಿ, ಕೊರೋನವನ್ನು ಸೋಲಿಸುವುದು) ಎಂಬಿತ್ಯಾದಿ ಪ್ರೇರಣಾ ಹಾಡುಗಳನ್ನು ಹಾಡುವಂತೆಯೂ ಗಿರಣಿ ವ್ಯಾಪಾರಿಗಳು, ಮಗ್ಗದ ಕಾರ್ಮಿಕರು ಮತ್ತಿತರ ಉದ್ಯೋಗಿಗಳಿಗೆ ನಗರಪಾಲಿಕೆ ಸೂಚಿಸಿದೆ.
“ ಕೊರೋನಾ ಸಾಂಕ್ರಾಮಿಕವನ್ನು ಮಟ್ಟಹಾಕಲು ಸರಕಾರವು ನಿಗದಿಪಡಿಸಿರುವ ಎಲ್ಲಾ ರೀತಿಯ ಮಾರ್ಗರ್ಶಿ ಸೂತ್ರಗಳನ್ನು ಅನುಸರಿಸುತ್ತೇನೆ ಹಾಗೂ ಎಲ್ಲಾ ರೀತಿಯ ಸುರಕ್ಷಿತ ಕ್ರಮಗಳನ್ನು ಅನುಸರಿಸುತ್ತೇನೆ ಮತ್ತು ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯಲು ನನ್ನ ಕಿರುಸೇವೆಯನ್ನು ಸಲ್ಲಿಸುತ್ತೇನೆ’’ ಎಂಬ ಪ್ರಮಾಣ ಕೂಡಾ ಮಾಡುವಂತೆ ಮಾರ್ಗದರ್ಶಿ ಸೂತ್ರವು ತಿಳಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಮಹಾಕಾರ್ಯದರ್ಶಿ ಜಯಂತಿ ರವಿ, ಸೂರತ್ ಪಾಲಿಕೆ ಅಧಿಕಾರಿಗಳು ಹಾಗೂ ಸೂರತ್ ಜವಳಿ ವ್ಯಾಪಾರಿಗಳ ಸಂಘದ ಒಕ್ಕೂಟ ಸದಸ್ಯರ ನಡುವೆ ಮಾತುಕತೆ ಕತೆ ನಡೆದ ಬಳಿಕ ಸೂರತ್ ನಗರಪಾಲಿಕೆಯ ಯೋಜನಾಧಿಕಾರಿ ಸಹಿಹಾಕಿರುವ ಈ ಮಾರ್ಗದರ್ಶಿ ಸೂತ್ರಗಳನ್ನು, ಬಿಡುಗಡೆಗಳಿಸಲಾಗಿದೆ.