ವರವರರಾವ್ ಮೃತಪಟ್ಟಿದ್ದಾರೆ ಎನ್ನುವುದು ಸುಳ್ಳು: ಸಂಬಂಧಿಕರ ಸ್ಪಷ್ಟನೆ
ಮುಂಬೈ: ಮುಂಬೈ ಜೈಲಿನಲ್ಲಿರುವ ಖ್ಯಾತ ಕವಿ- ಲೇಖಕ ವರವರರಾವ್ ಅವರ ಸಾವಿನ ಬಗೆಗಿನ ವದಂತಿ ಸುಳ್ಳು ಎಂದು ಅವರ ಬಾಸವ ಎನ್.ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.
ಕೆಲ ಕಿಡಿಗೇಡಿಗಳು ಅವರ ಸಾವಿನ ಬಗ್ಗೆ ವದಂತಿ ಹಬ್ಬಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ವರವರರಾವ್ ಅವರ ದೇಹಸ್ಥಿತಿ ವಿಷಮಿಸಿದೆ ಎಂದು ಅವರು ಹೇಳಿದ್ದಾರೆ.
ತಲೋಜಾ ಕೇಂದ್ರ ಕಾರಾಗೃಹದಲ್ಲಿರುವ ಅವರ ದೇಹಸ್ಥಿತಿ ಹದಗೆಟ್ಟಿದೆ. ಅವರ ಕುಟುಂಬದವರು ಮತ್ತು ವಕೀಲರು ಪದೇ ಪದೇ ಮನವಿ ಮಾಡಿದರೂ, ಅವರನ್ನು ಆಸ್ಪತ್ರೆಗೆ ಸೇರಿಸಲು ವಿಳಂಬ ಮಾಡುವ ಮೂಲಕ ಅಧಿಕಾರಿಗಳು ಅವರನ್ನು ಕೊಲ್ಲಲು ಬಯಸಿದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಿ ಒಂದು ವರ್ಷಕ್ಕೂ ಅಧಿಕ ಅವಧಿಯಿಂದ ಜೈಲಿನಲ್ಲಿಡಲಾಗಿದೆ.
“ಮಧ್ಯಾಹ್ನ 12.30ಕ್ಕೆ ಅವರು ಮೃತಪಟ್ಟಿದ್ದಾಗಿ ಕೆಲವರು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ವಕೀಲರು ತಕ್ಷಣ ಜೈಲು ಅಧಿಕಾರಿಗಳಿಗೆ ಕರೆ ಮಾಡಿದಾಗ ಈ ಸುದ್ದಿ ನಿಜವಲ್ಲ ಎಂದು ತಿಳಿಸಿದ್ದಾರೆ. ಕೆಲ ಕಿಡಿಗೇಡಿಗಳು ಇದನ್ನು ಸೃಷ್ಟಿಸಿದ್ದು, ಕೆಲವೇ ನಿಮಿಷಗಳಲ್ಲಿ ಸಾವಿರಾರು ಮಂದಿ ಈ ಸುದ್ದಿ ಹಬ್ಬಿಸಿದ್ದಾರೆ. ಕಾಳ್ಗಿಚ್ಚಿನಂತೆ ಸುದ್ದಿ ಹರಡಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡುತ್ತಿರುವುದಾಗಿ” ಅವರು ವಿವರಿಸಿದ್ದಾರೆ.
“ಅವರು ಅಸ್ವಸ್ಥತೆಯಿಂದ ಇದ್ದಾರೆ. ನನ್ನ ಸಹೋದರಿ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸಿಲ್ಲ. ಮೂರು ವರ್ಷಗಳ ಹಿಂದೆ ನಡೆದ ಅವರ ತಂದೆಯ ಅಂತ್ಯಸಂಸ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಸೋಡಿಯಂ ಮತ್ತು ಪೊಟ್ಯಾಶಿಯಂ ಅಂಶ ಕಡಿಮೆಯಾಗಿರುವುದು ಇದಕ್ಕೆ ಕಾರಣವಿರಬಹುದು” ಎಂದು ವೇಣುಗೋಪಾಲ್ ಅಭಿಪ್ರಾಯಪಟ್ಟರು.