ಮಾಸ್ಕ್ ವಿಚಾರದಲ್ಲಿ ಜಗಳ: ತಂದೆಯನ್ನು ರಕ್ಷಿಸಲು ಯತ್ನಿಸಿದ ಬಾಲಕಿ ಮೃತ್ಯು

ಗುಂಟೂರು: ತಂದೆಯ ರಕ್ಷಣೆಗೆ ಮುಂದಾದಾಗ ನಡೆದ ಹಲ್ಲೆಯಿಂದ ತಲೆಗೆ ತೀವ್ರ ಗಾಯವಾಗಿದ್ದ ಕರ್ನಾತಿ ಫಾತಿಮಾ ಎಂಬ ಬಾಲಕಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜುಲೈ 3ರಂದು ಬಾಲಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.
ಗುಂಟೂರು ಜಿಲ್ಲೆಯ ರೆಂಟಚಿಂತಲ ಎಂಬಲ್ಲಿ ಕೆಲ ಯುವಕರು ಮಾಸ್ಕ್ ಧರಿಸದ್ದನ್ನು ಬಾಲಕಿಯ ತಂದೆ ಆಕ್ಷೇಪಿಸಿದಾಗ ವಾಗ್ವಾದ ನಡೆಯಿತು. ತಂದೆಯ ರಕ್ಷಣೆಗೆ ಧಾವಿಸಿದ ಬಾಲಕಿಯ ತಲೆಗೆ ಬಲವಾದ ಹೊಡೆತ ಬಿದ್ದಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಮೊದಲು ಬಾಲಕಿಯ ತಂದೆ ಕರ್ನಾಟಿ ಯಲಮಂಡಲ ಮಾಸ್ಕ್ ಧರಿಸದೇ ಅಡ್ಡಾಡುತ್ತಿದ್ದ ಬಗ್ಗೆ ಕೆಲ ಯುವಕರು ಆಕ್ಷೇಪಿಸಿದ್ದರು. ಇದು ವಾಗ್ವಾದಕ್ಕೆ ಕಾರಣವಾಗಿತ್ತು. ಕೆಲ ದಿನಗಳ ಬಳಿಕ ಮಾರುಕಟ್ಟೆಯಲ್ಲಿ ಹಿಂದೆ ಆಕ್ಷೇಪಿಸಿದ್ದ ಯುವಕ ಮಾಸ್ಕ್ ಧರಿಸದೇ ಅಡ್ಡಾಡುತ್ತಿದ್ದುದನ್ನು ಯಲಮಂಡಲ ಅವರ ಸಂಬಂಧಿಕರು ಕಂಡರು. ಆಗ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿತ್ತು.
ಈ ಸಂದರ್ಭ ಯುವಕ ಯಲಮಂಡಲ ಅವರ ಮೇಲೆ ಬಡಿಗೆಯಿಂದ ಹೊಡೆಯಲು ಮುಂದಾದಾಗ ಬಾಲಕಿ ತಂದೆಯ ರಕ್ಷಣೆಗೆ ಧಾವಿಸಿದಳು. ಆಕೆಯ ತಲೆಗೆ ಬಲವಾದ ಏಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಬೆಳಿಗ್ಗೆ ಆಕೆ ಮೃಪಟ್ಟಿದ್ದಾಳೆ. ತಂದೆ ನೀಡಿದ ದೂರಿನ ಮೇರೆಗೆ ನಾಲ್ವರು ಯುವಕರ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.