ಮಂಗಳೂರು: ರಾಜ್ಯ ಸರಕಾರದ ವಿರುದ್ಧ ಎಸ್ಡಿಪಿಐ ಪ್ರತಿಭಟನೆ

ಮಂಗಳೂರು, ಜು.13: ಕೋವಿಡ್ 19 ನಿಯಂತ್ರಣದ ಹೆಸರಿನಲ್ಲಿ ರಾಜ್ಯ ಸರಕಾರವು ಲೂಟಿ ಆರಂಭಿಸಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದರೂ ಕೂಡ ಯಾವ್ಯಾವುದಕ್ಕೆ ಖರ್ಚು ಮಾಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಪ ಮಾಹಿತಿ ಇಲ್ಲ. ಕೊರೋನ ರೋಗದಂತಹ ಈ ಸಂದರ್ಭದಲ್ಲಿ ಜನಸಾಮಾನ್ಯರಿಗೆ ನೆರವು ನೀಡಬೇಕಾದ ಸರಕಾರ ಹಗರಣದಲ್ಲಿ ಭಾಗಿಯಾಗಿವೆ ಎಂದು ಆರೋಪಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಸೋಮವಾರ ನಗರದ ಪುರಭವನದ ಬಳಿ ಪ್ರತಿಭಟನೆ ನಡೆಯಿತು.
ಸರಕಾರ ತಕ್ಷಣ ಈ ಬಗ್ಗೆ ಜನತೆಗೆ ಮಾಹಿತಿ ನೀಡಬೇಕು. ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪ ಹೊತ್ತಿರುವ ಸಚಿವರಾದ ಆರ್. ಆಶೋಕ್ ಮತ್ತು ಶ್ರೀರಾಮುಲು ಅವರಿಂದ ಮುಖ್ಯಮಂತ್ರಿ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಸಿದ್ದೀಕ್ ಬೆಂಗರೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಪೊರೇಟರ್ ಮುನೀಬ್ ಬೆಂಗರೆ ಮಾತನಾಡಿದರು. ಅಕ್ಬರ್ ರಾಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವದೂದ್ ಬೆಂಗರೆ ಸ್ವಾಗತಿಸಿದರು. ಸಿದ್ದೀಕ್ ವಂದಿಸಿದರು.











