ವಿಕಾಸ್ ದುಬೆಯ ಮಾಸಿಕ ಗಳಿಕೆ 1 ಕೋಟಿ ರೂ.!
ತನಿಖೆಗಿಳಿದ ಜಾರಿ ನಿರ್ದೇಶನಾಲಯ
ಹೊಸದಿಲ್ಲಿ: ಇತ್ತೀಚೆಗೆ ಎಂಟು ಮಂದಿ ಪೊಲೀಸರನ್ನು ಗುಂಡಿಕ್ಕಿ ಸಾಯಿಸಿದ ಆರೋಪ ಹೊತ್ತ ಹಾಗೂ ನಂತರ ಪೊಲೀಸ್ ಎನ್ ಕೌಂಟರ್ ಗೆ ಬಲಿಯಾದ ಕುಖ್ಯಾತ ಪಾತಕಿ ವಿಕಾಸ್ ದುಬೆ ಮಾಸಿಕ ಸುಮಾರು 1 ಕೋಟಿ ರೂ. ಗಳಿಸುತ್ತಿದ್ದ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆಂದು ಪತ್ರಿಕೆಯೊಂದು ವರದಿ ಮಾಡಿದೆ.
ಆದರೆ ಆತ ಸರಳ ಜೀವಿಯಾಗಿದ್ದ, ಯಾವುದೇ ವ್ಯಸನಗಳೂ ಆತನಿಗಿರಲಿಲ್ಲ, ಜತೆಗೆ ವಿಲಾಸಿ ಜೀವನಶೈಲಿಗೆ ಆತ ಹಣವನ್ನೂ ಖರ್ಚು ಮಾಡುತ್ತಿರಲಿಲ್ಲ. ಆದುದರಿಂದ ಆತನ ಆರ್ಥಿಕ ವಹಿವಾಟುಗಳ ಕುರಿತಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಜಾರಿ ನಿರ್ದೇಶನಾಲಯಕ್ಕೆ ಕಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ.
ದುಬೆಯ ಉಡುಗೆ ತೊಡುಗೆಗಳೂ ಸರಳವಾಗಿದ್ದವಲ್ಲದೆ ಆತನ ಬ್ಯಾಂಕ್ ಖಾತೆಗಳಲ್ಲೂ ಅಷ್ಟೊಂದೇನೂ ದೊಡ್ಡ ಮೊತ್ತವಿಲ್ಲ ಎಂದು ಹೇಳಲಾಗಿದೆ. ಇದೀಗ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಆತನ ಸಮೀಪವರ್ತಿಗಳ ಬ್ಯಾಂಕ್ ಖಾತೆಗಳು ಹಾಗೂ ವ್ಯವಹಾರಗಳನ್ನು ಪರಿಶೀಲಿಸುತ್ತಿದ್ದಾರೆ. ಆತನಿಗೆ ಮಾಸಿಕ ರೂ 90 ಲಕ್ಷದಿಂದ ರೂ 1.20 ಕೋಟಿಯಷ್ಟು ಗಳಿಕೆಯಿತ್ತು. ಆದರೂ ಆತ ವಿದೇಶ ಪ್ರವಾಸಕ್ಕೆ ಹೋಗುತ್ತಿರಲಿಲ್ಲ ಎಂದು ಹೇಳಲಾಗಿದೆ.
ಆತನ ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ ಮಂದಿಯನ್ನು ಹುಡುಕುವ ಯತ್ನ ನಡೆಯುತ್ತಿದ್ದು, ಆತನಿಗೆ ಆಪ್ತರಾಗಿದ್ದ ಕೆಲ ಉದ್ಯಮಿಗಳು ಹಾಗೂ ಇತರರ ಪಟ್ಟಿಯನ್ನು ಅಧಿಕಾರಿಗಳು ತಯಾರಿಸುತ್ತಿದ್ದಾರೆ.