ಯುಎಇಯ ಮಂಗಳ ಶೋಧಕ ನೌಕೆ ‘ಹೋಪ್’ ಉಡ್ಡಯನ 2 ದಿನ ಮುಂದಕ್ಕೆ

ದುಬೈ, ಜು. 14: ಜಪಾನ್ ನ ತನೆಗಶಿಮ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಬೆಳಗ್ಗೆ (ಜಪಾನ್ ಸಮಯ) ಉಡಾವಣೆಗೊಳ್ಳಲು ನಿಗದಿಯಾಗಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಮಂಗಳ ಗ್ರಹ ಶೋಧಕ ನೌಕೆ ‘ಹೋಪ್’ನ ಉಡಾವಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ ಎಂದು ಯುಎಇ ಪ್ರಕಟಿಸಿದೆ.
ಜಪಾನ್ ನ ಉಡಾವಣಾ ಸ್ಥಳದಲ್ಲಿನ ಹವಾಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಮಿರೇಟ್ಸ್ ನ ಮಂಗಳ ಶೋಧಕ ನೌಕೆ ‘ಹೋಪ್’ನ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ಯುಎಇ ಸರಕಾರ ಮಂಗಳವಾರ ಟ್ವಿಟರ್ ನಲ್ಲಿ ಹೇಳಿದೆ.
ಜಪಾನ್ ಸಮಯ ಬುಧವಾರ ಬೆಳಗ್ಗೆ 5:51ಕ್ಕೆ ಉಡಾವಣೆಗೊಳ್ಳಬೇಕಿದ್ದ ಮಂಗಳ ಶೋಧಕ ನೌಕೆಯನ್ನು ಈಗ ಜಪಾನ್ ಸಮಯ ಶುಕ್ರವಾರ ಬೆಳಗ್ಗೆ 5:43ಕ್ಕೆ ಉಡಾಯಿಸಲಾಗುವುದು
ಮಂಗಳ ಗ್ರಹಕ್ಕೆ ಶೋಧ ನೌಕೆಯೊಂದನ್ನು ಕಳುಹಿಸಿದ ಮೊದಲ ಕೊಲ್ಲಿ ದೇಶವೆಂಬ ಹೆಗ್ಗಳಿಕೆಗೆ ಯುಎಇ ನಿಕಟವಾಗಿದೆ.
ಏಳು ಎಮಿರೇಟ್ಗಳನ್ನು ಒಳಗೊಂಡ ಯುಎಇಯ ಏಕೀಕರಣದ 50ನೇ ವಾರ್ಷಿಕ ದಿನದ ಸಂದರ್ಭದಲ್ಲಿ, ಅಂದರೆ 2021 ಫೆಬ್ರವರಿಯಲ್ಲಿ ‘ಹೋಪ್’ ಮಂಗಳನ ಕಕ್ಷೆಯನ್ನು ತಲುಪುವ ನಿರೀಕ್ಷೆಯಿದೆ.
ಕೆಂಪು ಗ್ರಹ (ಮಂಗಳ)ದ ವಾತಾವರಣದ ಬಗ್ಗೆ ಸಮಗ್ರ ಮಾಹಿತಿ ಪಡೆಯುವುದು ಹಾಗೂ ವೈಜ್ಞಾನಿಕ ಮುನ್ನಡೆಗಳಿಗೆ ಅವಕಾಶ ಕಲ್ಪಿಸುವುದು ಯುಎಇಯ ಮಂಗಳ ಶೋಧಕ ಯೋಜನೆಯ ಉದ್ದೇಶವಾಗಿದೆ.







