ಚೂರಿ ಜೊತೆ ತಾಳಿ ಹಿಡಿದು ಬಂದ ಪ್ರಿಯಕರ: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯ ಇರಿದು ಕೊಲೆ
ಬೆಂಗಳೂರಿನಲ್ಲಿ ನಡೆಯಿತು ಸಿನಿಮೀಯ ಶೈಲಿಯ ಕೃತ್ಯ

ಬೆಂಗಳೂರು, ಜು.14: ಪ್ರಿಯಕರನೊಬ್ಬ ಸಿನಿಮೀಯ ರೀತಿಯಲ್ಲಿ ಒಂದು ಕೈಯಲ್ಲಿ ಚಾಕು, ಮತ್ತೊಂದು ಕೈಯಲ್ಲಿ ತಾಳಿ ಹಿಡಿದುಕೊಂಡು ಬಂದು ಯುವತಿಯನ್ನು ಮದುವೆ ಆಗಲು ಒತ್ತಾಯಿಸಿದ್ದು, ಇದಕ್ಕೆ ಆಕೆ ನಿರಾಕರಿಸಿದ್ದಕ್ಕೆ ಮಾರಕಾಸ್ತ್ರಗಳಿಂದ ಗಂಭೀರ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಇಲ್ಲಿನ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಾಜಿನಗರದ ನಿವಾಸಿಯಾಗಿರುವ ಅಭಿಗೌಡ ಎಂಬಾತ ಈ ಕೃತ್ಯವೆಸಗಿರುವುದಾಗಿ ತಿಳಿದುಬಂದಿದೆ.
ಇಲ್ಲಿನ ಪ್ರಕಾಶ್ ನಗರದ ನಿವಾಸಿ 19 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ ಅಭಿಗೌಡ, ಮಂಗಳವಾರ ಸಂಜೆ ಯುವತಿಗೆ ಕರೆ ಮಾಡಿ ಮಾತನಾಡಬೇಕೆಂದು ಕರೆದಿದ್ದಾನೆ. ನಂತರ ಆಕೆಯನ್ನು ಗಿರಿನಗರ ಬಳಿ ಸ್ನೇಹಿತರನ್ನು ಭೇಟಿಯಾಗಬೇಕೆಂದು ಕರೆದೊಯ್ದು, ಗಿರಿನಗರದ ದ್ವಾರಕ ಸೈಂಟ್ ಪೀಟರ್ಸ್ ಶಾಲೆ ಬಳಿ ತಾಳಿ ಕಟ್ಟಲು ಮುಂದಾಗಿದ್ದಾನೆ. ಈ ವೇಳೆ ಯುವತಿ ನಿರಾಕರಿಸಿದ್ದರಿಂದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಯುವತಿ ಮನೆಗೆ ಬಾರದೇ ಇದ್ದುದನ್ನು ಕಂಡು ಗಾಬರಿಗೊಂಡ ಪೋಷಕರು ರಾಜಾಜಿನಗರ ಠಾಣೆಗೆ ದೂರು ನೀಡಿದ್ದಾರೆ. ಆದರೆ ಆರೋಪಿಯೇ ರಾಜಾಜಿನಗರ ಠಾಣೆಗೆ ತೆರಳಿ ತಾನು ಕೊಲೆ ಮಾಡಿರುವುದಾಗಿ ಶರಣಾಗಿದ್ದಾನೆ. ಘಟನೆ ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರಣ ರಾಜಾಜಿನಗರ ಪೊಲೀಸರು ಗಿರಿನಗರ ಠಾಣೆಗೆ ಆರೋಪಿಯನ್ನು ಒಪ್ಪಿಸಿದ್ದಾರೆ.
ಆರೋಪಿ ಅಭಿಗೌಡ, ಉತ್ತರ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.