ವೈದ್ಯರು ಸಹಿತ 17 ಮಂದಿಗೆ ಕೊರೋನ ಪಾಸಿಟಿವ್: ಉಡುಪಿ ಜಿಲ್ಲಾಸ್ಪತ್ರೆ ಎರಡು ದಿನ ಸೀಲ್‌ಡೌನ್

ಉಡುಪಿ, ಜು.16: ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯ ಮೂವರು ವೈದ್ಯರು ಸೇರಿದಂತೆ ಒಟ್ಟು 17 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದ್ದು, ಇದರಿಂದ ವೈರಸ್ ವ್ಯಾಪಕವಾಗಿ ಹರಡಿರುವ ಭೀತಿಯ ಹಿನ್ನೆಲೆಯಲ್ಲಿ ಇಂದು ಜಿಲ್ಲಾಸ್ಪತ್ರೆಯನ್ನು ಎರಡು ದಿನಗಳ ಅವಧಿಗೆ ಸೀಲ್‌ಡೌನ್ ಮಾಡಲಾಗಿದೆ.
ಆಸ್ಪತ್ರೆಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಬೇಕಾಗಿರುವುದರಿಂದ ಹೊರ ರೋಗಿ ಮತ್ತು ಒಳರೋಗಿ ವಿಭಾಗದ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆಸ್ಪತ್ರೆಯ ತುರ್ತು ಚಿಕಿತ್ಸೆ, ಐಸೋಲೇಶನ್ ಹಾಗೂ ಫಿವರ್ ಕ್ಲಿನಿಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಇಂದು ಆಸ್ಪತ್ರೆಯನ್ನು ಬಂದ್ ಮಾಡಿ, ಒಳಗಿನಿಂದ ಸ್ಯಾನಿಟೈಸ್ ಮಾಡುವ ಮೂಲಕ ಶುಚಿಗೊಳಿಸಲಾಯಿತು.
‘ಎರಡು ದಿನಗಳ ಕಾಲ ಆಸ್ಪತ್ರೆಯನ್ನು ಬಂದ್ ಮಾಡಿ, ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುವುದು. ಈ ಸಮಯದಲ್ಲಿ ಎಲ್ಲ ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಎರಡು ದಿನಗಳ ಬಳಿಕ ಆಸ್ಪತ್ರೆ ಮತ್ತೆ ಎಂದಿ ನಂತೆ ಕಾರ್ಯನಿರ್ವಹಿಸಲಿದೆ. ನಮ್ಮಿಂದ ಸಾರ್ವಜನಿಕರಿಗೆ ವೈರಸ್ ಹರಡಬಾರದೆಂಬ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಜು.15ರವರೆಗೆ ಸುಮಾರು 93 ಒಳರೋಗಿಗಳಿದ್ದರು. ಅವರಲ್ಲಿ ತೀರಾ ಅಗತ್ಯ ಇರುವವರನ್ನು ಮಾತ್ರ ಉಳಿಸಿ, ಉಳಿದವರನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ಪಾಸಿಟಿವ್ ಬಂದ ರೋಗಿಯನ್ನು ಪರೀಕ್ಷಿಸಿದ ವೈದ್ಯರನ್ನು ಕ್ವಾರಂಟೇನ್‌ಗೆ ಒಳಪಡಿಸಲಾಗಿದೆ. ಆ ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸಿರುವ ಎಲ್ಲ ಸಿಬ್ಬಂದಿಗಳು ಈಗಾಗಲೇ ಪರೀಕ್ಷೆಗೆ ಒಳಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಗ್ಯಾಂಗ್ರಿನ್ ರೋಗಿಯಿಂದ ಹರಡಿರುವ ಸಾಧ್ಯತೆ
ಆಸ್ಪತ್ರೆಯ ಮೂವರು ವೈದ್ಯರು, ಒಬ್ಬರು ಸ್ಟಾಪ್ ನರ್ಸ್, ನಾಲ್ವರು ಗ್ರೂಪ್ ಡಿ ನೌಕರರು, ಒಂದೇ ವಾರ್ಡಿನ 9 ಮಂದಿ ರೋಗಿಗಳಿಗೆ ಕೊರೋನ ಸೋಂಕು ದೃಢಪಟ್ಟಿದೆ. ಮಧುಮೇಹ ಗ್ಯಾಂಗ್ರಿನ್ ರೋಗಿಯೊಬ್ಬರಿಂದ ಈ ವೈರಸ್ ಹರಡಿರುವ ಶಂಕೆ ವ್ಯಕ್ತವಾಗಿದೆ. ಮೊದಲು ರೋಗದ ಲಕ್ಷ್ಮಣಗಳು ಈ ರೋಗಿಯಿಂದಲೇ ಕಂಡು ಬಂದಿದೆ ಎಂದು ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ತಿಳಿಸಿದ್ದಾರೆ.
ಸದ್ಯಕ್ಕೆ ಒಬ್ಬರು ವೈದ್ಯರು ಕೋವಿಡ್ ಆಸ್ಪತ್ರೆಯಲ್ಲಿ, ಇಬ್ಬರು ವೈದ್ಯರು, ಒಬ್ಬರು ನರ್ಸ್ ಮತ್ತು ನಾಲ್ವರು ನೌಕರರು ಮನೆಯಲ್ಲಿಯೇ ಹೋಮ್ ಐಸೋಲೇಶನ್ ನಲ್ಲಿದ್ದಾರೆ. ಸೋಂಕಿತ ರೋಗಿಗಳಿಗೆ ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.







