ಉಡುಪಿ: ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿ ಮನವಿ

ಉಡುಪಿ, ಜು.16: ಕೊರೋನ ವಾರಿಯರ್ಸ್ ಆಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12ಸಾವಿರ ರೂ. ಗೌರವಧನ ನಿಗದಿ ಪಡಿಸಬೇಕು ಮತ್ತು ಕೋವಿಡ್ ಸುರಕ್ಷತಾ ಉಪಕರಣಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಗುರುವಾರ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.
ಕಳೆದ ನಾಲ್ಕು ತಿಂಗಳುಗಳಿಂದ ಆಶಾ ಕಾರ್ಯಕರ್ತೆಯರು, ಕೊರೋನ ವಾರಿಯರ್ಸ್ ಆಗಿ ದುಡಿಯತ್ತಿದ್ದು, ಕೊರೋನ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಮಾಹಿತಿ ಸಂಗ್ರಹಿಸುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. ಅವರಿಗೆ ಸದ್ಯ ಕೇವಲ 4ಸಾವಿರ ರೂ. ಮಾನಸಿಕ ಗೌರವ ಧನ ನೀಡುತ್ತಿರುವುದು ಸರಿಯಲ್ಲ. ಅದೇ ರೀತಿ ಸರಕಾರದಿಂದ ಅವರಿಗೆ ಯಾವುದೇ ಸುರಕ್ಷತಾ ಕಿಟ್‌ಗಳನ್ನು ನೀಡುತ್ತಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.
ಮನವಿಯನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ವೀಕರಿಸಿದರು. ಈ ಸಂದರ್ಭ ದಲ್ಲಿ ಮಹಿಳಾ ಕಾಂಗ್ರೆಸ್ ಮುಖಂಡರಾದ ವರೋನಿಕಾ ಕರ್ನೆಲಿಯೋ, ಡಾ. ಸುನೀತಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ರೋಶನಿ ಒಲಿವೆರ, ಗೋಪಿ ಕೆ.ನಾಕ್, ಚಂದ್ರಿಕಾ ಶೆಟ್ಟಿ, ಫೌಜಿಯಾ ಸಾದಿಕ್, ಜ್ಯೋತಿ ಬರೆಟ್ಟೊ, ರೋಜಲಿನ್ ಕ್ರಾಸ್ತಾ, ಶಾಂತಿ ಪಿರೇರಾ, ಮರೀನಾ ಜಾನ್, ಐರಿನ್ ಡಿಸೋಜ, ಪ್ರಮೀಳಾ ಜತ್ತನ್ನ ಮೊದಲಾದವರು ಉಪಸ್ಥಿತರಿದ್ದರು.





