ಟೋಕಿಯೊ ಒಲಿಂಪಿಕ್ಸ್ ರದ್ದಾದರೆ ಬೀಜಿಂಗ್ ಕ್ರೀಡಾಕೂಟವೂ ನಡೆಯುವ ಸಾಧ್ಯತೆ ಇಲ್ಲ ಐಒಸಿ ಸದಸ್ಯ ಡಿಕ್ ಪೌಂಡ್

ಟೋಕಿಯೊ: ಕೋವಿಡ್-19 ಕಾರಣದಿಂದಾಗಿ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್ ಮುಂದಿನ ವರ್ಷ 2021ರಲ್ಲಿ ನಡೆಯದಿದ್ದರೆ 2022ರ ಬೀಜಿಂಗ್ ಚಳಿಗಾಲದ ಕ್ರೀಡಾಕೂಟವು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುವ ಸಾಧ್ಯತೆಯಿದೆ ಎಂದು ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಹಿರಿಯ ಸದಸ್ಯ ಡಿಕ್ ಪೌಂಡ್ ಹೇಳಿದ್ದಾರೆ.
ಕೊರೋನ ವೈರಸ್ ಸಾಂಕ್ರಾಮಿಕ ರೋಗದ ನಿಯಂತ್ರಣ ಅಥವಾ ಇದಕ್ಕೆ ಯಾವುದೇ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗದಿದ್ದರೆ ಟೋಕಿಯೊ ಒಲಿಂಪಿಕ್ಸ್‌ನ್ನು ಮುಂದೂಡುವ ಅಥವಾ ರದ್ದುಗೊಳಿಸುವ ಬಗ್ಗೆ ಐಒಸಿ ಕ್ರಮಕೈಗೊಳ್ಳಬೇಕಾಗಬಹುದು.
ಟೋಕಿಯೊ ಒಲಿಂಪಿಕ್ಸ್ (ಜುಲೈ 23 ರಿಂದ ಆಗಸ್ಟ್ 8, 2021ರವರೆಗೆ ) ಮುಗಿದು ಕೇವಲ ಆರು ತಿಂಗಳ ನಂತರ (2022ರ ಫೆಬ್ರವರಿ 4ರಿಂದ 20ರವರೆಗೆ) ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ನಿಗದಿಯಾಗಿದೆ.
ಬೀಜಿಂಗ್ ಒಲಿಂಪಿಕ್ಸ್ ರಾಜಕೀಯ ಕಾರಣ ಸೇರಿದಂತೆ ಹಲವು ಕಾರಣಗಳಿಂದಾಗಿ ಮತ್ತಷ್ಟು ಜಟಿಲವಾಗಬಹುದು, ಇದರಲ್ಲಿ ಹಾಂಕಾಂಗ್‌ನಲ್ಲಿ ಹೆಚ್ಚುತ್ತಿರುವ ಅಸ್ಥಿರ ಪರಿಸ್ಥಿತಿ ಅಮೆರಿಕ ಮತ್ತು ಚೀನಾ ಸಂಬಂಧಗಳನ್ನು ಒಂದು ಪ್ರಮುಖ ವಿಷಯವಾಗಿ ನೋಡಬಹುದಾದ ಅಮೆರಿಕದ ಚುನಾವಣೆಯೂ ಸೇರಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ‘‘ಚೀನಾ ವೈರಸ್’’ ಎಂದು ಹೆಸರಿಸಿದ್ದಾರೆ ಮತ್ತು ಚೀನಾದ ನಗರವಾದ ವುಹಾನ್‌ನಲ್ಲಿ ಮೊದಲ ಬಾರಿ ಈ ರೋಗ ಪತ್ತೆಯಾಗಿತ್ತು. ಈ ಕಾರಣದಿಂದಾಗಿ ಏಕಾಏಕಿ ಚೀನಾ ದೇಶವನ್ನು ಅಮೆರಿಕ ದೂಷಿಸಿತ್ತು. ಈ ರೋಗವನ್ನು ನಿಯಂತ್ರಿಸಲು ವಿಫಲವಾದ ಕಾರಣ ಚೀನಾ ಇದರ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹಿಂದೊಮ್ಮೆ ಹೇಳಿದ್ದರು.
ಐಒಸಿ ಉಪಾಧ್ಯಕ್ಷರಾಗಿ ಮತ್ತು ವಾಡಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಕೆನಡಾದ ವಕೀಲ ಪೌಂಡ್ ಅವರು ಯಾವುದೇ ಸನ್ನಿವೇಶಗಳು ಉದ್ಭವಿಸಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಕ್ರೀಡಾಕೂಟವನ್ನು ಬಹಿಷ್ಕರಿಸುವ ಸಾಧ್ಯತೆಯೂ ಇದೆ. ಆದರೆ ದೇಶವು ವೈರಸ್ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗದಿದ್ದರೆ ಯುಎಸ್ ಭಾಗವಹಿಸದಿರುವುದನ್ನು ಚೀನಾ ಪರಿಗಣಿಸಬಹುದು.
ಚೀನಾ ವಿರೋಧಿ ನಿಲುವನ್ನು ಮುಂದಿಟ್ಟುಕೊಂಡು ಅಮೆರಿಕ ಒಂದಡೆ ಚುನಾವಣಾ ಪ್ರಚಾರವನ್ನು ಯೋಜಿಸುತ್ತಿದೆ ಎಂದು ಪೌಂಡ್ ಆರೋಪಿಸಿದರು.







