ಭಾರತ-ಚೀನಾ ಗಡಿ ವಿವಾದ ಬಗೆಹರಿಸಬೇಕು, ಇದರ ಯಶಸ್ಸಿನ ವ್ಯಾಪ್ತಿಯ ಬಗ್ಗೆ ಖಾತರಿ ಇಲ್ಲ: ರಾಜನಾಥ್ ಸಿಂಗ್

ಲಡಾಕ್/ಹೊಸದಿಲ್ಲಿ, ಜು. 17: ಲಡಾಕ್ ಗಡಿ ವಿವಾದವನ್ನು ಬಗೆಹರಿಸಲು ಭಾರತ ಚೀನಾ ನಡುವೆ ಮಾತುಕತೆ ನಡೆಯುತ್ತಿದೆ. ಆದರೆ, ಈ ವಿವಾದ ಎಷ್ಟರ ಮಟ್ಟಿಗೆ ಪರಿಹಾರವಾಗುತ್ತದೆ ಎಂದು ನಾನು ಖಾತರಿ ನೀಡಲಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಡಾಕ್ ನಲ್ಲಿ ಶುಕ್ರವಾರ ಸೇನೆಯೊಂದಿಗೆ ನಡೆಸಿದ ಮಾತುಕತೆ ಸಂದರ್ಭ ಹೇಳಿದ್ದಾರೆ.
ಜೂನ್ 15ರ ಚೀನಾದೊಂದಿಗಿನ ಘರ್ಷಣೆಯ ಒಂದು ತಿಂಗಳ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಡಾಕ್ ಗೆ ಈ ಭೇಟಿ ನೀಡಿದ್ದಾರೆ. ಇದುವರೆಗೆ ಯಾವೆಲ್ಲಾ ವಿಷಯದ ಬಗ್ಗೆ ಮಾತುಕತೆ ನಡೆದಿದೆಯೋ ಅವುಗಳೆಲ್ಲಾ ಪರಿಹಾರವಾಗಬೇಕು. ಆದರೆ, ಅದು ಎಷ್ಟರ ಮಟ್ಟಿಗೆ ಪರಿಹಾರವಾಗುತ್ತದೆ ಎಂದು ನನಗೆ ಖಾತರಿ ನೀಡಲು ಸಾಧ್ಯವಿಲ್ಲ. ಆದರೆ, ಜಗತ್ತಿನಲ್ಲಿರುವ ಯಾವುದೇ ಶಕ್ತಿಯೂ ನಮ್ಮ ಭೂಮಿಯ ಒಂದು ಇಂಚನ್ನೂ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ರಾಜನಾಥ್ ಸಿಂಗ್ ಪೊಂಗಾಂಗ್ ಲೇಕ್ನ ಸಮೀಪ ಇರುವ ಲುಕುಂಗ್ ಠಾಣೆಗೆ ಭೇಟಿ ನೀಡಿದ ಸಂದರ್ಭ ಹೇಳಿದರು.
ಜಗತ್ತಿಗೆ ಶಾಂತಿ ಸಂದೇಶ ನೀಡುವ ಏಕೈಕ ರಾಷ್ಟ್ರ ಭಾರತ. ನಾವು ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ ಹಾಗೂ ಯಾವುದೇ ದೇಶದ ಭೂಮಿಯನ್ನು ನಮ್ಮದೆಂದೂ ಎಂದೂ ಹೇಳಿಲ್ಲ. ಭಾರತ ‘ವಸುಧೈವ ಕುಟುಂಬಕಂ’ ಎಂಬ ಸಂದೇಶವನ್ನು ಪಾಲಿಸುತ್ತದೆ ಎಂದು ಸಿಂಗ್ ಹೇಳಿದರು.
‘‘ನಾವು ಅಶಾಂತಿ ಬಯಸಲಾರೆವು. ಶಾಂತಿ ಬಯಸುತ್ತೇವೆ. ಯಾವುದೇ ದೇಶದ ಗೌರವಕ್ಕೆ ಧಕ್ಕೆ ತರುವುದು ನಮ್ಮ ಸ್ವಭಾವ ಅಲ್ಲ. ಭಾರತದ ಪ್ರತಿಷ್ಠೆಗೆ ಧಕ್ಕೆ ತರಲು ಯಾರಿಂದಾದರೂ ಪ್ರಯತ್ನ ನಡೆದರೆ ನಾವು ಸಹಿಸಲಾರೆವು. ನಾವು ತಕ್ಕ ಪ್ರತ್ಯುತ್ತರ ನೀಡಲಿದ್ದೇವೆ” ಎಂದು ಸಿಂಗ್ ಹೇಳಿದ್ದಾರೆ.
“ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆ ಇದೆ. ನಾನು ನಮ್ಮ ಯೋಧರ ಜೊತೆ ನಿಂತಾಗ ಹೆಮ್ಮೆ ಅನ್ನಿಸುತ್ತದೆ. ನಮ್ಮ ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಈ ಸಾವಿನಿಂದ ಎಲ್ಲ 130 ಕೋಟಿ ಭಾರತೀಯರನ್ನು ದುಃಖಿತರಾಗಿದ್ದಾರೆ” ಎಂದು ರಾಜನಾಥ್ ಸಿಂಗ್ ಹೇಳಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎರಡು ದಿನಗಳ ಭೇಟಿಗಾಗಿ ಲಡಾಕ್ ಹಾಗೂ ಜಮ್ಮು ಕಾಶ್ಮೀರಕ್ಕೆ ಆಗಮಿಸಿದ್ದರು. ಈ ಸಂದರ್ಭ ಅವರ ಜೊತೆಗೆ ರಕ್ಷಣಾ ದಳದ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಸೇನಾ ವರಿಷ್ಠ ಜನರಲ್ ಎಂ.ಎಂ. ನರವನೆ ಉಪಸ್ಥಿತರಿದ್ದರು.







