ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿರುವ ಬೆಡ್‌ಗಳ ಬಗ್ಗೆ ಮಾಹಿತಿ ಕೊಡಿ: ದ.ಕ. ಜಿಲ್ಲಾಡಳಿತಕ್ಕೆ ಐವನ್ ಆಗ್ರಹ

ಮಂಗಳೂರು, ಜು.17: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್‌ಗಳ ಸಂಖ್ಯೆ ಹೆಚ್ಚುತ್ತಿವೆ. ಇದರಿಂದ ಜಿಲ್ಲೆಯ ಜನತೆ ಭಯಭೀತರಾಗಿದ್ದಾರೆ. ಹಾಗಾಗಿ ದ.ಕ.ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿರುವ ಬೆಡ್‌ಗಳ ಬಗ್ಗೆ ಮಾಹಿತಿ ಕೊಡಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.
ಕೊರೋನ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ವೆನ್ಲಾಕ್ ಆಸ್ಪತ್ರೆಯಲ್ಲಿರುವ 280 ಬೆಡ್‌ಗಳು ಕೂಡ ಭರ್ತಿಯಾಗಿವೆ. ವೆಂಟಿಲೇಟರ್ ಕೂಡ ಭರ್ತಿಯಾಗಿವೆ. ಹಾಗಾಗಿ ದ.ಕ. ಜಿಲ್ಲೆಯ ಪ್ರಮುಖ ಆಸ್ಪತ್ರೆಗಳಲ್ಲಿ ಕೊರೋನ ರೋಗಿಗಳಿಗೆ ಎಷ್ಟೆಷ್ಟು ಬೆಡ್‌ಗಳನ್ನು ಮೀಸಲಿಡಲಾಗಿದೆ ಎಂಬುದರ ಬಗ್ಗೆ ಶನಿವಾರ ಸಂಜೆಯೊಳಗೆ ಮಾಹಿತಿ ನೀಡದಿದ್ದರೆ ಆಸ್ಪತ್ರೆಯ ಮುಂದೆ ಧರಣಿ ಕೂರುವುದಾಗಿ ಐವನ್ ಎಚ್ಚರಿಸಿದ್ದಾರೆ.
ಕೊರೋನ ರೋಗವನ್ನು ನಿಗ್ರಹಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಅಲ್ಲದೆ ರೋಗಿಗಳನ್ನು ನಿರ್ಲಕ್ಷಿಸಿದೆ. ಆರೋಗ್ಯ ಸಚಿವರು ದೇವರ ಮೊರೆ ಹೋಗಿ ಎಂದು ಕೈ ಚೆಲ್ಲಿದ್ದಾರೆ. ಇದರಿಂದ ಜನರು ಭಯಭೀತರಾಗಿದ್ದಾರೆ ಎಂದು ಐವನ್ ಡಿಸೋಜ ಆಪಾದಿಸಿದ್ದಾರೆ.





