ರಾಜಸ್ಥಾನ: ಕಾಂಗ್ರೆಸ್ ನ ಬೆಳ್ಳಿ ತಟ್ಟೆಯಲ್ಲಿ ಉಂಡು ಹಾರಿದ ಪೈಲಟ್ !

ಕಾಂಗ್ರೆಸ್ ನ ಇನ್ನೊಬ್ಬ ಜನಪ್ರಿಯ ಯುವ ನಾಯಕ 'ಕೈ' ಬಹುತೇಕ ಬಿಟ್ಟಿದ್ದಾರೆ. ಯಾರೂ ತಮ್ಮನ್ನು ವಯಸ್ಸಾದ ಹಿರಿಯ ನಾಯಕರು ಎಂದು ಕರೆದುಕೊಳ್ಳಲು ಇಷ್ಟಪಡದ ಈ ಸಂದರ್ಭದಲ್ಲಿ ತನ್ನನ್ನು ಇನ್ನೂ ಯುವನಾಯಕ ಎಂದು ಪರಿಗಣಿಸಿದ್ದಾರೆ ಎಂಬುದು ಈ 'ಪೈಲಟ್'ರ ಅಸಮಾಧಾನ. ತೀರಾ ಪವಾಡವೇನಾದರೂ ನಡೆಯದಿದ್ದರೆ ಶೀಘ್ರವೇ ಕಾಂಗ್ರೆಸ್ ನ ಈ ಭವಿಷ್ಯದ ನಾಯಕ ಬಿಜೆಪಿಯಲ್ಲಿ ತನ್ನ ಭವಿಷ್ಯ ರೂಪಿಸುವುದು ಬಹುತೇಕ ಖಚಿತ ( ತಾನು ಬಿಜೆಪಿ ಸೇರುವುದೇ ಇಲ್ಲ ಎಂದು ಈ ನಾಯಕ ಹೇಳಿದ್ದನ್ನು ನೀವು ನಂಬುತ್ತೀರಾ ? )
ಸಚಿನ್ ಪೈಲಟ್ ಕಾಂಗ್ರೆಸ್ ಬಿಡುವುದರಿಂದ ಆ ಪಕ್ಷಕ್ಕೆ ದೊಡ್ಡ ನಷ್ಟವಿದೆ. ಅದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಪ್ರಾದೇಶಿಕ ಜನನಾಯಕರ ಭಾರೀ ಕೊರತೆಯಿಂದ ಬಳಲುತ್ತಿರುವ ಕಾಂಗ್ರೆಸ್ ಸಚಿನ್ ನಿರ್ಗಮನದಿಂದ ಕಳಕೊಳ್ಳುವುದು ಬಹಳಷ್ಟಿದೆ. ಆದರೆ ಇದಕ್ಕಾಗಿ ಕಾಂಗ್ರೆಸ್ಸನ್ನೇ ದೂರಬೇಕೇ ?, ರಾಹುಲ್ - ಸೋನಿಯಾ - ಪ್ರಿಯಾಂಕಾ ಅವರ ಅಸಮರ್ಥತೆ ಅಥವಾ ಇಂತಹ ನಾಯಕರ ಕುರಿತ ಅವರೊಳಗಿನ ಅಸಹನೆಯೇ ಇದಕ್ಕೆ ಕಾರಣವೇ ?, ಇನ್ನೂ ವಯಸ್ಸಾದ , ಗಾಂಧಿ ಕುಟುಂಬದ ಅನುಯಾಯಿಗಳನ್ನೇ ನೆಚ್ಚಿಕೊಂಡು ಆ ಪಕ್ಷ ಜನಪ್ರಿಯ ನಾಯಕರನ್ನು ಒಬ್ಬೊಬ್ಬರಾಗಿ ಕಳೆದುಕೊಳ್ಳುತ್ತಿದೆಯೇ ?, ಈ ಎಲ್ಲ ಪ್ರಶ್ನೆಗಳಿಗೆ 'ಹೌದು' ಎಂಬ ಸರಳೀಕೃತ ಉತ್ತರ ನೀಡುವುದು ಸುಲಭ. ಆದರೆ ಅಷ್ಟು ಸರಳ ಅಲ್ಲ ಈ ವಿಷಯ.
ಸಚಿನ್ ಪೈಲಟ್ ರಾಜಸ್ತಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂಬುದು ನಿಜ. ಅಜ್ಮೀರ್ ನಲ್ಲಿ 2014ರ ಲೋಕಸಭಾ ಚುನಾವಣೆ ಸೋತ ಬಳಿಕ ಅವರು ಇಡೀ ರಾಜ್ಯವನ್ನು ಸುತ್ತಿ ಜನರೊಡನೆ ಬೆರೆತು ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದೂ ಸುಳ್ಳಲ್ಲ. ಆದರೆ ಅದಕ್ಕಾಗಿ ಅವರಿಗೆ ಕೇವಲ 37 ವರ್ಷ ಆಗಿರುವಾಗ, ಅವರು ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಾಗ ಅವರ ಪಕ್ಷ ರಾಜ್ಯಾಧ್ಯಕ್ಷ ಹುದ್ದೆಯನ್ನು ಕೊಟ್ಟು ವೇದಿಕೆ ಕಲ್ಪಿಸಿತ್ತು ಎಂಬುದೂ ಅಷ್ಟೇ ಸತ್ಯ. ಸಚಿನ್ ಪೈಲಟ್ ಗೆ ಈಗಿನ್ನೂ 43 ವರ್ಷ. ಅದು ಸಾಮಾನ್ಯವಾಗಿ ಕಾಂಗ್ರೆಸ್ ನಲ್ಲಿ ಪಂಚಾಯತ್, ಕಾರ್ಪೊರೇಷನ್ ಟಿಕೆಟ್ ಗಾಗಿ ಊರಿನ ಇನ್ನೂ ನೂರು ಜನರೊಂದಿಗೆ ಜಿದ್ದಿಗೆ ಬೀಳುವ ವಯಸ್ಸು. ಈ ವಯಸ್ಸಿಗೆ ಇನ್ನೂ 5 -10 ವರ್ಷ ಸೇರಿದರೆ ಆಗುವ ವಯಸ್ಸಿನ ಸಾವಿರಾರು ಕಾಂಗ್ರೆಸ್ ನಾಯಕರು ಕನಿಷ್ಠ 20 ವರ್ಷ ಪಕ್ಷಕ್ಕಾಗಿ ಓಡಾಡಿ, ನಾಯಕರ ಹಿಂದೆ ಅಲೆದು ಯಾವುದಾದರೂ ಒಂದು ಸ್ಥಾನ ಪಡೆಯಲು ಹೆಣಗಾಡುತ್ತಿದ್ದಾರೆ. ಒಂದು ಎಮ್ಮೆಲ್ಲೆ, ಎಮ್ಮೆಲ್ಸಿ ಸ್ಥಾನ ಇಂದಲ್ಲ ನಾಳೆ ಸಿಗಬಹುದು ಎಂಬ ಆಸೆಯಲ್ಲಿ ಮೂರ್ನಾಲ್ಕು ದಶಕಗಳ ಕಾಲ ಪಕ್ಷಕ್ಕಾಗಿ ಜೀವ ತೇದ ಎಷ್ಟು ಜನರನ್ನು ನೀವು ಕಾಂಗ್ರೆಸ್ ನಲ್ಲಿ ನೋಡಿಲ್ಲ ಹೇಳಿ ?
ಇಂತಹ ಪರಿಸ್ಥಿತಿಯಲ್ಲಿ ಪೈಲಟ್ 43ನೇ ವರ್ಷಕ್ಕೆ ರಾಜಸ್ತಾನದಂತಹ ಪ್ರಮುಖ ರಾಜ್ಯದ ಉಪಮುಖ್ಯಮಂತ್ರಿ. 2004ರಲ್ಲಿ ದೌಸದಿಂದ ಲೋಕಸಭಾ ಸದಸ್ಯರಾದಾಗ ಸಚಿನ್ ಪೈಲಟ್ ಗೆ 26 ವರ್ಷ ವಯಸ್ಸು. ಇಡೀ ದೇಶದಲ್ಲೇ ಅತ್ಯಂತ ಕಿರಿಯ ಲೋಕಸಭಾ ಸದಸ್ಯ ಎಂಬ ಹೆಗ್ಗಳಿಕೆ. ಆ ಬಳಿಕ 2009ರಲ್ಲಿ ಅಜ್ಮೀರ್ ನಿಂದ ಮತ್ತೆ ಲೋಕಸಭಾ ಸದಸ್ಯ. ಗೃಹ ಖಾತೆ ಸಹಿತ ಎರಡು ಸಂಸದೀಯ ಸ್ಥಾಯೀ ಸಮಿತಿ ಸದಸ್ಯತನ. ಕೇಂದ್ರ ಸಚಿವರಾಗುವಾಗ ಪೈಲಟ್ ಗೆ 35 ವರ್ಷ ವಯಸ್ಸು ! ಇಷ್ಟೆಲ್ಲಾ ಕೊಟ್ಟೂ 2014ರಲ್ಲಿ ತನ್ನ ಲೋಕಸಭಾ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾದರು ಈ ಜನಪ್ರಿಯ ನಾಯಕ. ಆದರೂ ಪಕ್ಷ ಕೈಬಿಡಲಿಲ್ಲ. ರಾಜ್ಯಾಧ್ಯಕ್ಷ ಹುದ್ದೆಯನ್ನೇ ಕರೆದು ಕೊಟ್ಟಿತು. ಅಂದರೆ ಹೆಚ್ಚು ಕಡಿಮೆ ತನ್ನ 26ನೇ ವರ್ಷದಿಂದ ಈವರೆಗೂ ಒಂದಲ್ಲ ಒಂದು ರೀತಿಯ ಅಧಿಕಾರವನ್ನು ಅನುಭವಿಸುತ್ತಲೇ ಬಂದಿದ್ದಾರೆ ಈ ಪಕ್ಷದೊಳಗಿನ ' ನಿರ್ಲಕ್ಷಿತ' ನಾಯಕ !
ಸಚಿನ್ ತಂದೆ ರಾಜೇಶ್ ಪೈಲಟ್ ಕಾಂಗ್ರೆಸ್ ನ ಅತ್ಯಂತ ಪ್ರಭಾವಿ ನಾಯಕರಲ್ಲೊಬ್ಬರಾಗಿದ್ದವರು. 2000ದಲ್ಲಿ ಅಪಘಾತವೊಂದರಲ್ಲಿ ನಿಧನರಾದರು. ಕಾಂಗ್ರೆಸ್ ಅಧ್ಯಕ್ಷ ಪದವಿವರೆಗೂ ತಲುಪಿದ್ದ ರಾಜೇಶ್ ಕೇಂದ್ರ ಸಚಿವರಾಗಿದ್ದರು. ಅವರ ನಿಧನದ ಬಳಿಕ ಪುತ್ರನಿಗೆ ಕೂತಲ್ಲಿಗೆ ತಂದು ಟಿಕೆಟ್ ಕೊಟ್ಟು ಗೆಲ್ಲಿಸಿತು ಕಾಂಗ್ರೆಸ್ ಪಕ್ಷ. ಇಲ್ಲಿ ಇನ್ನೊಂದು ಆಯಾಮವಿದೆ. ಸಚಿನ್ ಮದುವೆಯಾಗಿದ್ದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಪುತ್ರಿ ಸಾರಾ ಅವರನ್ನು. ಈಕೆಯ ಸೋದರ ಒಮರ್ ಅಬ್ದುಲ್ಲಾ ಕೂಡ ಆ ರಾಜ್ಯದ ಸಿಎಂ ಆಗಿದ್ದವರು. ಅಷ್ಟೇ ಯಾಕೆ, ಈಕೆಯ ಅಜ್ಜ ಅಂದರೆ ಫಾರೂಕ್ ಅಬ್ದುಲ್ಲಾರ ತಂದೆ ಶೇಕ್ ಅಬ್ದುಲ್ಲಾ ಸುಮಾರು ಒಂದು ದಶಕದಷ್ಟು ಕಾಲ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದವರು. ಫಾರೂಕ್ ಅಬ್ದುಲ್ಲಾ ಮತ್ತು ಉಮರ್ ಅಬ್ದುಲ್ಲಾ ಕಾಶ್ಮೀರದಲ್ಲಿ ಸದಾ ಅಧಿಕಾರದ ಸುತ್ತಮುತ್ತಲೇ ತಮ್ಮ ರಾಜಕೀಯ ನಡೆಸುತ್ತಾ ಬಂದವರು. ಅವರ ರಾಜಕೀಯದ ಮೊದಲ ಗುರಿ ಅಧಿಕಾರ ಎಂಬುದು ಅವರ ರಾಜಕೀಯ ಜೀವನವನ್ನು ಸ್ವಲ್ಪ ಗಮನಿಸಿದವರಿಗೂ ಬಹಳ ಸುಲಭವಾಗಿ ಗೊತ್ತಾಗಿಬಿಡುತ್ತದೆ. ಒಂದೋ ರಾಜ್ಯದಲ್ಲಿ ಇಲ್ಲದಿದ್ದರೆ ಕೇಂದ್ರದಲ್ಲಿ ತಂದೆ ಮಗ ಅಧಿಕಾರ, ಗೂಟದ ಕಾರು, ಬಂಗಲೆ ತಪ್ಪಿಸಿಕೊಳ್ಳದೆ ಇಲ್ಲಿವರೆಗೂ ಬಂದಿದ್ದಾರೆ. ಅವರಿಗೆ ಬೇಕಾದಾಗ ಕಾಂಗ್ರೆಸ್ಸೂ ಓಕೇ, ಬಿಜೆಪಿಯೂ ಓಕೆ. ತಂದೆ ಕಾಂಗ್ರೆಸ್ ಸರಕಾರದಲ್ಲಿ , ಮಗ ಬಿಜೆಪಿ ಸರಕಾರದಲ್ಲಿ ಕೇಂದ್ರ ಮಂತ್ರಿಗಳಾಗಿ 'ಸೇವೆ' ಸಲ್ಲಿಸಿದವರು.
ಇಂತಹ ಫಾರೂಕ್ ಅಬ್ದುಲ್ಲಾ ಹಾಗು ಅವರ ಮಗ ಒಮರ್ ಅಬ್ದುಲ್ಲಾರನ್ನು ಮೋದಿ ಸರಕಾರ ಕಳೆದ ವರ್ಷ ಆಗಸ್ಟ್ ನಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ಹಿಂದಿನ ದಿನ ಗೃಹ ಬಂಧನದಲ್ಲಿಟ್ಟಿತು. ಹಾಗೆ ಮನೆ ಸೇರಿದ್ದ ತಂದೆ ಮಗ ಇಬ್ಬರನ್ನೂ ಕೇಂದ್ರ ಸರಕಾರ ಈ ವರ್ಷ ಮಾರ್ಚ್ ನಲ್ಲಿ ಬಿಡುಗಡೆ ಮಾಡಿತು. ಸದಾ ಕ್ಲೀನ್ ಶೇವ್ ಆಗಿ ಮಿಂಚುತ್ತಿದ್ದ ಒಮರ್ ಅಬ್ದುಲ್ಲಾ ಇಷ್ಟುದ್ದ ಗಡ್ಡ ಇಟ್ಟುಕೊಂಡು ಬಂದು ಜನರೆದುರು ನಿಂತು ಎಲ್ಲರ ಸಿಂಪಥಿ ಗಳಿಸಿದರು. ಆದರೆ ಈ ಬಿಡುಗಡೆ ಅಷ್ಟು ಸರಳವಾಗಿಲ್ಲ ಎಂಬುದು ಹೆಚ್ಚು ಸಮಯ ಗುಟ್ಟಾಗಿ ಉಳಿಯಲಿಲ್ಲ. ತಂದೆ ಮಗನ ಬಿಡುಗಡೆಗೆ ಮುನ್ನ ರಾ ಮಾಜಿ ಮುಖ್ಯಸ್ಥ ಎ ಎಸ್ ದುಲತ್ ಫಾರೂಕ್ ಅಬ್ದುಲ್ಲಾರನ್ನು ಗುಪ್ತವಾಗಿ ಭೇಟಿಯಾಗಿದ್ದರು. ಅವರು ಕೇಂದ್ರ ಸರಕಾರದ ಸಂಧಾನಕಾರರಾಗಿಯೇ ಫಾರೂಕ್ ರನ್ನು ಭೇಟಿಯಾಗಿದ್ದರು ಹಾಗು ಅವರಿಬ್ಬರ ನಡುವೆ ನಡೆದ ಮಾತುಕತೆಯ ಫಲವಾಗಿಯೇ ಮೊದಲು ತಂದೆ, ಬಳಿಕ ಮಗನನ್ನು ಬಿಡುಗಡೆ ಮಾಡಲಾಯಿತು ಎಂಬುದು ಈಗ ಎಲ್ಲರಿಗೂ ಗೊತ್ತಿರುವ ವಿಷಯ. ಸಾಲದ್ದಕ್ಕೆ ಜಮ್ಮು ಕಾಶ್ಮೀರದಲ್ಲಿ ಯಾವಾಗ ಚುನಾವಣೆ ನಡೆದರೂ ಒಮರ್ ಅಬ್ದುಲ್ಲಾ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ದುಲತ್ ಅತ್ಯಂತ ವಿಶ್ವಾಸದಿಂದ ಹೇಳಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಹೀಗೆ ಅಜ್ಜ - ಅಪ್ಪ - ಮಗ ಎಲ್ಲರೂ ಮುಖ್ಯಮಂತ್ರಿಗಳಾಗಿ ಈಗ ಮತ್ತೆ ಮುಖ್ಯಮಂತ್ರಿ ಆಗಲು ಅಣಿಯಾಗುತ್ತಿರುವ ಕುಟುಂಬದ ಅಳಿಯ ಈ ಸಚಿನ್ ಪೈಲಟ್. ಹಾಗಾಗಿ ಈ ದೃಷ್ಟಿಯಲ್ಲೂ ಪೈಲಟ್ ರ ಸಿಎಂ ಹುದ್ದೆಯ ದಾಹವನ್ನು ನೋಡಬೇಕು.
ಪೈಲಟ್ ಡಿಸಿಎಂ ಆದ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಧೂಳೀಪಟವಾಗಿದೆ. ಇದ್ದ ಅಧಿಕಾರದ ಮೂಲಕ ಜನರನ್ನು ಒಲಿಸಿಕೊಂಡು ಪಕ್ಷಕ್ಕೆ ಕೆಲವು ಸ್ಥಾನ ಗೆಲ್ಲಲು ಸಾಹೇಬರಿಗೆ ಸಾಧ್ಯವಾಗಲಿಲ್ಲ. ಬಾಲಕನಾಗಿದ್ದಾಗ ಸಿಗಲು ಪ್ರಾರಂಭವಾದ ಅಧಿಕಾರದಲ್ಲಿ ವರ್ಷದಿಂದ ವರ್ಷಕ್ಕೆ ಭಡ್ತಿಯಾಗುತ್ತಲೇ ಹೋಗಬೇಕು. ಅದರಲ್ಲಿ ಹೋರಾಟ, ಪ್ರಬಲ ಕೇಂದ್ರ ಸರಕಾರದ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸ, ಇದ್ದ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡು ಜನಮನ ಗೆಲ್ಲುವ ಪರಿಶ್ರಮ, ಮುಂದಿನ ಚುನಾವಣೆಗೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಜಿದ್ದು ಅದೆಲ್ಲ ರಾಹುಲ್ ಗಾಂಧಿಯ ಕೆಲಸ. ಇವರ ಪಕ್ಷದಲ್ಲಿ ಇವರ ಮುಖ ನೋಡಿಕೊಂಡು ಸಾವಿರಾರು ಕಾರ್ಯಕರ್ತರು ಖುಷಿ ಪಟ್ಟುಕೊಂಡು ಪಕ್ಷಕ್ಕಾಗಿ ಕೆಲಸ ಮಾಡಿ ಖಾಲಿ ಕೈಯಲ್ಲಿ ಮನೆಗೆ ಹೋಗುತ್ತಿದ್ದಾರೆ. ಆದರೆ ಇವರಿಗೆ ಅರ್ಜೆಂಟಾಗಿ ಸಿಎಂ ಆಗಬೇಕು. ಸಿಎಂ ಆದ ಮೇಲೆ ... ಮತ್ತೆ ಮತ್ತೆ ಆಗುತ್ತಲೇ ಇರಬೇಕು. ಅಷ್ಟೇ. ಅದಕ್ಕೆ ಪಕ್ಷ ಯಾವುದಾದರೂ ಸರಿ.







