ಭಾರತ ದಲಿತರಿಗೆ ಸವಲತ್ತುಗಳನ್ನು ನಿರಾಕರಿಸುವ ದೇಶವಾಗಿ ಪರಿವರ್ತನೆ: ಎಸ್‍ಡಿಪಿಐ
ಮಧ್ಯಪ್ರದೇಶದಲ್ಲಿ ದಲಿತ ದಂಪತಿ ಮೇಲಿನ ಹಲ್ಲೆಗೆ ಖಂಡನೆ

ಬೆಂಗಳೂರು, ಜು.17: ಮಧ್ಯಪ್ರದೇಶದ ಗುನಾ ಜಿಲ್ಲೆಯ ಜಗತ್ಪುರ ಚಕ್ ಪ್ರದೇಶದಲ್ಲಿ ದಲಿತ ದಂಪತಿಯ ಮೇಲೆ ಪೊಲೀಸರು ನಡೆಸಿರುವ ಹಲ್ಲೆ ಅಮಾನವೀಯ ಕೃತ್ಯವಾಗಿದ್ದು, ಬಲಪಂಥೀಯ ಕೋಮುವಾದಿ ಆಡಳಿತದಲ್ಲಿ ಭಾರತವು ದಲಿತರು ಹಾಗೂ ಅಲ್ಪಸಂಖ್ಯಾತರಿಗೆ ಯಾವುದೇ ಸವಲತ್ತುಗಳನ್ನು ನಿರಾಕರಿಸುವ ದೇಶವಾಗಿ ಪರಿವರ್ತನೆಯಾಗಿದೆ ಎಂದು ಎಸ್‍ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಧ್ಯಪ್ರದೇಶದಲ್ಲಿ ಸರಕಾರಿ ಭೂಮಿಯಲ್ಲಿ ದಲಿತ ಕುಟುಂಬ ಕೃಷಿ ಮಾಡಿದ್ದನ್ನೇ ನೆಪವಾಗಿಟ್ಟು, ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಜತೆಗೂಡಿ ಕೃಷಿ ಬೆಳೆಯನ್ನು ನಾಶ ಮಾಡಿದ್ದಾರೆ. ಇದನ್ನು ತಡೆಯಲು ಹೋದ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತಮ್ಮ ಕಣ್ಣ ಮುಂದೆಯೇ ಸಾಲಸೋಲ ಮಾಡಿ ಬೆಳೆದ ಬೆಳೆ ನಾಶವಾಗುತ್ತಿರುವುದನ್ನು ಕಂಡು ದಲಿತ ದಂಪತಿಗಳು ಅಧಿಕಾರಿಗಳ ಮುಂದೆಯೇ ವಿಷ ಸೇವಿಸಿದ್ದಾರೆ. ಇದನ್ನು ನೋಡಿಯೂ ಅವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡದೆ ಅವರ ಮೇಲೆ ಮತ್ತಷ್ಟು ಹಲ್ಲೆ ಮಾಡಿದ್ದಾರೆ. ಇವರನ್ನು ರಕ್ಷಿಸಲು ಹೋದ ದಂಪತಿಯ ಮಕ್ಕಳ ಮೇಲೆಯೂ ಹಲ್ಲೆ ನಡೆಸಿದ್ದಾರೆ.
ಈ ಪ್ರಕರಣದ ಸಂಬಂಧ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕಾದ ಜಿಲ್ಲಾ ಪೊಲೀಸರು, ಹಲ್ಲೆಗೊಳಗಾದ ದಲಿತ ದಂಪತಿಯ ವಿರುದ್ದವೇ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ವಿರುದ್ದ ಕ್ರಮ ಕೈಗೊಂಡಿರುವುದು ಸಮಾಧಾನಕರ ಸಂಗತಿಯಾಗಿದೆ. ಹಲ್ಲೆ ಮಾಡಿದ ಪೊಲೀಸರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಹಲ್ಲೆಗೊಳಗಾದ ದಲಿತ ದಂಪತಿಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.







