‘ಮಂಗಳವಾರ ಸಂಜೆಯವರೆಗೆ ಸಚಿನ್ ಪೈಲಟ್, ಬಂಡಾಯ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ’
ರಾಜಸ್ಥಾನ ಸ್ಪೀಕರ್ ಗೆ ಹೈಕೋರ್ಟ್ ಸೂಚನೆ

ಜೈಪುರ, ಜು.17: ರಾಜಸ್ತಾನದಲ್ಲಿ ಬಂಡಾಯದ ಬಾವುಟ ಹಾರಿಸಿರುವ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹಾಗೂ ಅವರ 18 ಬೆಂಬಲಿಗ ಶಾಸಕರ ವಿರುದ್ಧದ ಕ್ರಮವನ್ನು ಮಂಗಳವಾರ(ಜು.21)ದ ವರೆಗೆ ತಡೆಹಿಡಿಯುವಂತೆ ವಿಧಾನಸಭೆಯ ಸ್ಪೀಕರ್ಗೆ ರಾಜಸ್ತಾನ ಹೈಕೋರ್ಟ್ ನಿರ್ದೇಶನ ನೀಡಿದೆ.
ತಮ್ಮನ್ನು ಶಾಸಕತ್ವದಿಂದ ಅನರ್ಹಗೊಳಿಸಲು ಮುಂದಾಗಿರುವ ಸ್ಪೀಕರ್ ಕ್ರಮವನ್ನು ಪ್ರಶ್ನಿಸಿ ಪೈಲಟ್ ಮತ್ತವರ ತಂಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ. ಇದರಿಂದ ಪೈಲಟ್ ಬಣಕ್ಕೆ ತುಸು ನಿರಾಳದ ಭಾವನೆ ಮೂಡಿದೆ.
ಒಂದು ವೇಳೆ ಅನರ್ಹತೆಯ ಕ್ರಮವನ್ನು ನ್ಯಾಯಾಲಯ ಎತ್ತಿಹಿಡಿದಿದ್ದರೆ ಸದನದ ಬಲ ಕಡಿಮೆಯಾಗಲಿದ್ದು 106 ಶಾಸಕರ ಬೆಂಬಲ ಹೊಂದಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸುಲಭದಲ್ಲಿ ವಿಶ್ವಾಸ ಮತ ಗೆಲ್ಲುವ ಸಾಧ್ಯತೆಯಿತ್ತು. ಈ ಮಧ್ಯೆ, ಇಬ್ಬರು ಬಂಡಾಯ ಶಾಸಕರನ್ನು ಕಾಂಗ್ರೆಸ್ ಅಮಾನತುಗೊಳಿಸಿದೆ. ಶಾಸಕರಾದ ಬನ್ವರ್ಲಾಲ್ ಶರ್ಮ ಮತ್ತು ವಿಶ್ವೇಂದ್ರ ಸಿಂಗ್ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಜೊತೆ ದೂರವಾಣಿಯಲ್ಲಿ ಮಾತನಾಡಿರುವ ಆಡಿಯೊ ಟೇಪ್ ಲಭಿಸಿದ್ದು, ತಮ್ಮದೇ ಪಕ್ಷದ ಸರಕಾರವನ್ನು ಉರುಳಿಸಲು ಬಿಜೆಪಿಯೊಂದಿಗೆ ಕೈಜೋಡಿಸಿದ್ದಕ್ಕಾಗಿ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಜೊತೆಗೆ, ಎರಡು ಎಫ್ಐಆರ್ ಗಳನ್ನು ಕೂಡಾ ದಾಖಲಿಸಲಾಗಿದೆ.








