ಲಾಕ್ ಡೌನ್: ವಲಸೆ ಕಾರ್ಮಿಕರು, ಬಡವರಿಗೆ 80,000 ಆಹಾರದ ಕಿಟ್ ಗಳನ್ನು ವಿತರಿಸಿದ ರೋಟರಿ ಬೆಂಗಳೂರು ಮಾನ್ಯತಾ
ಫಲಾಪೇಕ್ಷೆಯಿಲ್ಲದ ಸೇವೆಗಾಗಿ ಮುಹಮ್ಮದ್ ತಸ್ಲೀಲ್ ಗೆ ‘ಮ್ಯಾಕ್ ಐವರ್’ ಪ್ರಶಸ್ತಿ

ಕೊರೋನ ನಿಯಂತ್ರಣಕ್ಕಾಗಿ ದೇಶಾದ್ಯಂತ ಹೇರಲಾಗಿದ್ದ ಲಾಕ್ ಡೌನ್ ದಿಂದ ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರು, ನಿರಾಶ್ರಿತರು, ದಿನಗೂಲಿ ಕಾರ್ಮಿಕರು, ಬಡವರಿಗೆ ಅನೇಕ ಸ್ವಯಂ ಸೇವಕ ಸಂಘಟನೆಗಳು ಸಹಾಯ ಮಾಡಿವೆ. ರೋಟರಿ ಕ್ಲಬ್ ಕೂಡಾ ತನ್ನ ಸ್ವಯಂ ಸೇವಕರ ಮೂಲಕ ಇದೇ ರೀತಿ ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರು, ಬಡವರಿಗೆ ಸುಮಾರು 80,000 ಆಹಾರ ಕಿಟ್ ಗಳನ್ನು ವಿತರಿಸಿದೆ.
ರೋಟರಿ ಸ್ವಯಂ ಸೇವಕರೊಲ್ಲಬ್ಬರಾಗಿರುವ ಮಂಗಳೂರಿನ ಮುಹಮ್ಮದ್ ತಸ್ಲೀಲ್, ತಮ್ಮ ನೇತೃತ್ವದ ಸ್ವಯಂಸೇವಕ ತಂಡದೊಂದಿಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ ಆಸ್ಪತ್ರೆಗಳಿಗೆ, ಕೋವಿಡ್ ಸೋಂಕಿತರಿಗೆ, ವಲಸೆ ಕಾರ್ಮಿಕರಿಗೆ, ದಿನಗೂಲಿ ಕಾರ್ಮಿಕರಿಗೆ, ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸುಮಾರು 80,000 ಆಹಾರದ ಕಿಟ್ ಗಳನ್ನು ವಿತರಿಸಿದ್ದಾರೆ. ಅಲ್ಲದೇ ಈ ತಂಡ 10,000 ಮಾಸ್ಕ್, 5,000 ಸಾನಿಟೈಸರ್, ಮುಖಗವಚ, ಅಗತ್ಯ ವಸ್ತುಗಳಾದ ಹಾಲು, ತರಕಾರಿ ಕಿಟ್ ಗಳನ್ನು ಸುಮಾರು 16 ಸಾವಿರ ಕುಟುಂಬಗಳಿಗೆ ವಿತರಿಸಿದ್ದಾರೆ.
‘ಸುಮಾರು 400 ದಿನಸಿ ಕಿಟ್ ಗಳನ್ನು ಅಂಗವಿಕಲರು ಹಾಗು ಅರ್ಹ ಕುಟುಂಬಗಳಿಗೆ ವಿತರಿಸಲಾಗಿದೆ’ ಎಂದು ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ತಸ್ಲೀಲ್ ತಿಳಿಸುತ್ತಾರೆ.
ಎರಡನೆ ಅವಧಿಯ ಲಾಕ್ ಡೌನ್ ಘೋಷಣೆಯಾದ ನಂತರ ತೀವ್ರ ಸಂಕಷ್ಟದಲ್ಲಿದ್ದ ಬಡ ವಲಸೆ ಕಾರ್ಮಿಕರಿಗೆ ನೆರವಾಗಲು ಈ ತಂಡ ಮುಂದಡಿಯಿಟ್ಟಿತು. ವಲಸೆ ಕಾರ್ಮಿಕರು ರಿಜಿಸ್ಟ್ರೇಶನ್ ನಂತರ ಆಗಮಿಸುವ ಬಸ್ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಈ ತಂಡ ತಮ್ಮ ಸ್ಟೇಶನ್ ಗಳನ್ನು ಆರಂಭಿಸಿತು. ಅಲ್ಲಿಗೆ ಆಗಮಿಸುವ ಕಾರ್ಮಿಕರಿಗೆ ಆಹಾರದ ಕಿಟ್ ಗಳು, ತಿಂಡಿ ತಿನಿಸುಗಳು, ಹಾಲು, ನೀರು ಮತ್ತು ಪಾನೀಯಗಳನ್ನು ವಿತರಿಸಿತು. 36,000ಕ್ಕೂ ಹೆಚ್ಚು ಕಾರ್ಮಿಕರಿಗೆ ಈ ರೀತಿಯ ನೆರವು ನೀಡಲಾಗಿದೆ.
ಮಂಗಳೂರಿನ ಬಿಜೈ ನಿವಾಸಿಯಾಗಿರುವ ತಸ್ಲೀಲ್, ಹಳೆಯಂಗಡಿ ಅಬ್ದುಲ್ ರಹೀಮ್ ಅವರ ಪುತ್ರ. 2002ರಲ್ಲಿ ಅವರು ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದು, ನಗರದಲ್ಲೇ ಇಂಟೀರಿಯರ್ ಡಿಸೈನ್ ಕೆಲಸ ಮಾಡಿಕೊಂಡಿದ್ದಾರೆ.2016-17ರಲ್ಲಿ ಅವರು ರೋಟರಿ ಕ್ಲಬ್ ಸೇರಿದರು.
ಕೊರೋನ ಬಿಕ್ಕಟ್ಟಿನ ಸಮಯದಲ್ಲಿ ಅವರು ಮಾಡಿದ ಸೇವೆಯನ್ನು ಗುರುತಿಸಿ ಸಂಸ್ಥೆಯು ತಸ್ಲೀಲ್ ಅವರಿಗೆ ವಾರ್ಷಿಕ ‘ಮ್ಯಾಕ್ ಐವರ್’ (McIver Award) ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚೆಗಷ್ಟೇ ಅವರು ಬೆಂಗಳೂರು ರೋಟರಿ ಮಾನ್ಯತಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತಸ್ಲೀಲ್ ನೇತೃತ್ವದಲ್ಲಿ ಇಸ್ಕಾನ್ ದೇವಸ್ಥಾನದಲ್ಲಿರುವವರಿಗೆ ತರಕಾರಿ ಮತ್ತು ಅಲ್ಲಿನ ಗೋಶಾಲೆಯಲ್ಲಿ 40-50 ಗೋವುಗಳಿಗೆ ಪ್ರತಿದಿನ ಆಹಾರಗಳನ್ನು ವಿತರಿಸಲಾಗಿದೆ. ತಸ್ಲೀಲ್ ಮತ್ತವರ ತಂಡಕ್ಕೆ ಇಸ್ಕಾನ್ ಅಭಿನಂದನಾ ಪತ್ರ ನೀಡಿದೆ.
ಕೊರೋನದಿಂದ ಸಂಕಷ್ಟದಲ್ಲಿದ್ದ ಜನರಿಗೆ ಆಹಾರದ ಪ್ಯಾಕ್ ಗಳನ್ನು ದಾನವಾಗಿ ನೀಡಿದ್ದಕ್ಕಾಗಿ ಬೆಂಗಳೂರು ಮೆಡಿಕಲ್ ಕಾಲೇಕ್ ಆ್ಯಂಡ್ ರಿಸರ್ಚ್ ಇನ್ ಸ್ಟಿಟ್ಯೂಟ್ ಮತ್ತು ವಿಕ್ಟೋರಿಯಾ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರು ಇವರ ಪ್ರಯತ್ನಗಳಿಗಾಗಿ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಬರೆದಿದೆ.
ತಸ್ಲೀಲ್ ಅವರು ಬೆಂಗಳೂರು ಬ್ಯಾರೀಸ್ ಅಸೋಸಿಯೇಶನ್ ಮತ್ತು ಬೆಂಗಳೂರಿನ ಅಲ್ ಮದೀನಾ ಅಸೋಸಿಯೇಶನ್ ನ ಸದಸ್ಯರೂ ಆಗಿದ್ದಾರೆ.









