ಉಡುಪಿ: ರೈಲ್ವೆ ಖಾಸಗೀಕರಣವನ್ನು ವಿರೋಧಿಸಿ ಪ್ರತಿಭಟನೆ

ಉಡುಪಿ, ಜು.17: ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ಯೋಜನೆಯನ್ನು ವಿರೋಧಿಸಿ, ಪ್ರಸ್ತಾಪವನ್ನು ಕೈಬಿಡುವಂತೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಉಡುಪಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಇಂದ್ರಾಳಿಯಲ್ಲಿರುವ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.
ಕಳೆದ ನಾಲ್ಕು ತಿಂಗಳುಗಳಿಂದ ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೋನ ಎಂಬ ಮಹಾಮಾರಿಯಿಂದ ದೇಶದ ಜನತೆಯನ್ನು ರಕ್ಷಿಸಲು ಯಾವುದೇ ಪ್ರಾಮಾಣಿಕ ಪ್ರಯತ್ನ ನಡೆಸದೇ, ಇಂಥ ಸಂದಿಗ್ಧ ಹಾಗೂ ಸಂಕಷ್ಟದ ದಿನಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಸಾರ್ವಜನಿಕ ಸಂಪತ್ತುಗಳನ್ನು ಸದ್ದಿಲ್ಲದೇ ಖಾಸಗಿ ಕಂಪೆನಿಗಳಿಗೆ ಹಾಗೂ ವಿದೇಶಿ ಕಾರ್ಪೋರೇಟ್‌ಗಳಿಗೆ ಮಾರಾಟ ಮಾಡುವ ಕೆಲಸಕ್ಕೆ ಕೈಹಾಕಿದೆ ಎಂದು ಸಿಐಟಿಯುನ ಜಿಲ್ಲಾ ಮುಖಂಡ ಬಾಲಕೃಷ್ಣ ಶೆಟ್ಟಿ ಆರೋಪಿಸಿದರು.
ಈಗಾಗಲೇ ದೇಶದ ಕಲ್ಲಿದ್ದಲು ಗಣಿಗಳನ್ನು, ರಕ್ಷಣಾ ವಲಯಗಳನ್ನು, ವಿದ್ಯುಚ್ಛಕ್ತಿ ನಿಗಮಗಳನ್ನು, ಎಪಿಎಂಸಿ ಮಾರುಕಟ್ಟೆಗಳನ್ನು ಖಾಸಗೀಕರಣ ಮಾಡಿರುವ ಈ ಸರಕಾರ ಇದೀಗ, ದೇಶದ ಅತೀ ದೊಡ್ಡ ಸಾರ್ವಜನಿಕ ಉದ್ಯಮವಾದ ಹಾಗೂವ ಜಗತ್ತಿನಲ್ಲಿ ಅತೀದೊಡ್ಡ ಸಂಪರ್ಕ ಜಾಲ ಹೊಂದಿರುವ ಭಾರತೀಯ ರೈಲ್ವೆಯನ್ನು ತುಂಡರಿಸಿ ಖಾಸಗಿಯವರ ಕೈಗೊಪ್ಪಿಸಲು ಹೊರಟಿದೆ ಎಂದು ಬಾಲಕೃಷ್ಣ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ದೇಶದ ಪ್ರತಿಷ್ಠಿತ 109 ರೈಲು ನಿಲ್ದಾಣಗಳನ್ನು ಖಾಸಗಿಯವರಿಗೆ ಒಪ್ಪಿಸಿ, ಅವುಗಳ ಮೂಲಕ 151 ಖಾಸಗಿ ರೈಲುಗಳನ್ನು ಓಡಿಸಲು ಮುಂದಾಗಿದೆ. ರೈಲ್ವೆ ಎಂಬುದು ಭಾರತೀಯರ ಪಾಲಿಗೆ ಹಾಗೂ ದೇಶದ ಆರ್ಥಿಕತೆಗೆ ಜೀವನಾಡಿ ಇದ್ದಂತೆ. ಇದನ್ನು ಖಾಸಗಿಯವರಿಗೆ ಒಪ್ಪಿಸುವುದೆಂದರೆ ಕೋಟ್ಯಾಂತರ ಮಂದಿಯ ನರನಾಡಿಯನ್ನು ಸ್ಥಬ್ಧಗೊಳಿಸಿದಂತೆ, ಜೊತೆಗೆ ದೇಶದ ಆರ್ಥಿಕತೆಯೇ ನಾಶವಾದಂತೆ ಎಂದವರು ದೂರಿದರು.
ಈ ಹಿನ್ನೆಲೆಯಲ್ಲಿ ಕೋಟ್ಯಾಂತರ ಭಾರತೀಯರ ಬದುಕಿನ ಮೇಲೆ ದುಷ್ಪರಿಣಾ ಬೀರುವ ರೈಲ್ವೆ ಖಾಸಗೀಕರಮವನ್ನು ಪ್ರಬಲವಾಗಿ ವಿರೋಧಿಸಲು ಸಿಐಟಿಯು ನಿರ್ಧರಿಸಿದೆ. ಇದರಿಂದ ಬಾಧಿತರಾಗುವ ರೈತರು, ವಲಸೆ ಕಾರ್ಮಿಕರು, ಜನಸಾಮಾನ್ಯರು, ವಿಕಲಚೇತನರು, ಸಣ್ಣ ವ್ಯಾಪಾರಸ್ಥರು ಹಾಗೂ ರೈಲ್ವೆ ಇಲಾಖೆ ನೌಕರರೊಂದಿಗೆ ಸೇರಿ ದೇಶವ್ಯಾಪಿ ಪ್ರತಿಭಟನೆ ನಡೆಸುತಿದ್ದೇವೆ ಎಂದು ಸಿಐಟಿಯು ಅಧ್ಯಕ್ಷ ರಾಮ ಕರ್ಕಡ ತಿಳಿಸಿದರು.
ದೇಶದ ಆರ್ಥಿಕತೆ ಹಾಗೂ ಜನಸಾಮಾನ್ಯರ ಬದುಕಿನ ದೃಷ್ಟಿಯಿಂದ ಈ ಖಾಸಗೀಕರಣವನ್ನು ಕೈಬಿಡಬೇಕೆಂದು ಆಗ್ರಹಿಸುತ್ತಿರುವುದಾಗಿ ಅವರು ಹೇಳಿದರು. ಉಡುಪಿಯ ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ಸ್ಟೇಷನ್ ಮಾಸ್ಟರ್ ಮೂಲಕ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಕವಿರಾಜ್, ಮುಖಂಡರಾದ ಶಶಿಧರ ಗೊಲ್ಲ, ಶೇಖರ ಬಂಗೇರ, ದಯಾನಂದ ಕೋಟ್ಯಾನ್, ಸುಭಾಷ್ ನಾಯಕ್, ವಿದ್ಯಾರಾಜ್, ಮೋಹನ್ ಮುಂತಾದವರು ಭಾಗವಹಿಸಿದ್ದರು.








