ಕೊರೋನ ಸೋಂಕಿಗೊಳಗಾದ ಮಿಂಕ್: ಒಂದು ಲಕ್ಷದಷ್ಟು ಪ್ರಾಣಿಗಳ ಸಾಮೂಹಿಕ ಹತ್ಯೆಗೆ ಆದೇಶಿಸಿದೆ ಈ ದೇಶ!

ಮ್ಯಾಡ್ರಿಡ್: ಕೋವಿಡ್-19 ಹರಡುವ ಭೀತಿಯಿಂದ ಸ್ಪೇನ್ ಸರಕಾರ ಅಲ್ಲಿನ ಫಾರ್ಮ್ ಒಂದರಲ್ಲಿನ ಸುಮಾರು ಒಂದು ಲಕ್ಷ ಮಿಂಕ್ ಪ್ರಾಣಿಗಳನ್ನು ಸಂಹರಿಸಲು ಆದೇಶ ನೀಡಿದೆ.
ಡೆನ್ಮಾರ್ಕ್ ನ ತುಪ್ಪಳ ಫಾರ್ಮ್ ಗಳಲ್ಲಿ ಈಗಾಗಲೇ 10 ಲಕ್ಷ ಮಿಂಕ್ ಗಳನ್ನು ವಧಿಸಲಾಗಿದೆ. ತಮ್ಮ ರೋಮಗಳಿಗಾಗಿಯೇ ಸಾಕಲ್ಪಡುವ ಮಿಂಕ್ ಪ್ರಾಣಿಗಳ ವಧೆ ಯುರೋಪ್ ಖಂಡದ ತುಪ್ಪಳ ಫಾರ್ಮಿಂಗ್ ಉದ್ಯಮವನ್ನೇ ಅಲ್ಲೋಲಕಲ್ಲೋಲಗೊಳಿಸಿದೆ.
ಇಲ್ಲಿನ ಮಿಂಕ್ ಫಾರ್ಮ್ ನ ಒಬ್ಬ ಸಿಬ್ಬಂದಿಗೆ ಕೋವಿಡ್ ಸೋಂಕು ತಗಲಿದ ನಂತರ ಪ್ರಾಣಿಗಳಲ್ಲೂ ಇದು ಹರಡಿದೆ. ಆದರೆ ಮನುಷ್ಯರಿಂದ ಪ್ರಾಣಿಗಳಿಗೆ ಹಾಗೂ ಪ್ರಾಣಿಗಳಿಂದ ಮನುಷ್ಯರಿಗೆ ಕೊರೊನ ವೈರಸ್ ಹರಡುತ್ತದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೋವಿಡ್ ಸೋಂಕು ಈಗಾಗಲೇ ಡೆನ್ಮಾರ್ಕ್ ದೇಶದ 24 ತುಪ್ಪಳ ಫಾರ್ಮ್ ಗಳಿಗೆ ಹರಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸ್ಪೇನ್ ದೇಶದ ಪುಯೆಬ್ಲಾ ಡೆ ವಾಲ್ವೆರ್ಡ್ ಎಂಬಲ್ಲಿರುವ ಮಿಂಕ್ ಫಾರ್ಮ್ ನಲ್ಲಿ ಕೆಲಸ ಮಾಡುತ್ತಿರುವ ಏಳು ಮಂದಿಗೆ ಕೋವಿಡ್-19 ಸೋಂಕು ಮೇ ತಿಂಗಳಲ್ಲಿ ದೃಢಪಟ್ಟ ನಂತರ ಅಲ್ಲಿ ಬಹಳಷ್ಟು ನಿಗಾ ಇಡಲಾಗಿತ್ತಾದರೂ ಜುಲೈ 13ರಂದು ನಡೆದ ಪರೀಕ್ಷೆಗಳಲ್ಲಿ ಶೇ 87ರಷ್ಟು ಮಿಂಕ್ ಗಳಿಗೆ ಸೋಂಕು ತಗಲಿರುವುದು ಕಂಡು ಬಂದಿತ್ತು. ಮತ್ತೆ ಅವುಗಳಿಂದ ಸೋಂಕು ಮನುಷ್ಯರಿಗೆ ಹರಡುವುದು ಬೇಡವೆಂದು ಅವುಗಳ ವಧೆಗೆ ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







