ಕೊಡಗಿನಲ್ಲಿಂದು 2 ವರ್ಷದ ಮಗು ಸೇರಿ 13 ಮಂದಿಗೆ ಕೊರೋನ: ಸೋಂಕಿತರ ಸಂಖ್ಯೆ 252ಕ್ಕೆ ಏರಿಕೆ

ಮಡಿಕೇರಿ ಜು.17: ಕೊಡಗು ಜಿಲ್ಲೆಯಲ್ಲಿ ಇಂದು ಕೂಡ 13 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು, ಪ್ರಕರಣಗಳ ಸಂಖ್ಯೆ 252 ಕ್ಕೆ ಏರಿಕೆಯಾಗಿದೆ. ಇವರಲ್ಲಿ 141 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತುತ 107 ಸಕ್ರಿಯ ಕೊರೋನ ಪ್ರಕರಣಗಳಿದ್ದು, ಇಲ್ಲಿಯವರೆಗೆ ಮಾರಕ ಸೋಂಕಿನಿಂದ 4 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿನ ನಿಯಂತ್ರಣಕ್ಕಾಗಿ 104 ನಿರ್ಬಂಧಿತ ಪ್ರದೇಶಗಳನ್ನು ತೆರೆಯಲಾಗಿದೆ.
ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ಶಿವ ಪಾರ್ವತಿ ದೇವಸ್ಥಾನ ಬಳಿಯ ನಿವಾಸಿ 39 ವರ್ಷದ ಪುರುಷ, 35 ವರ್ಷದ ಮಹಿಳೆ, 5 ವರ್ಷದ ಬಾಲಕ, 24 ವರ್ಷದ ಮಹಿಳೆ ಮತ್ತು 2 ವರ್ಷದ ಹೆಣ್ಣು ಮಗುವಿನಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ. ಇದು ಬೆಂಗಳೂರಿನ ಕೊರೋನ ಸೋಂಕು ಪ್ರಕರಣದ ಪ್ರಾಥಮಿಕ ಸಂಪರ್ಕದಿಂದ ಬಂದುದಾಗಿದೆ. ಮೂರ್ನಾಡು ಸಮೀಪದ ಮುತ್ತಾರ್ಮುಡಿ ಗ್ರಾಮದ ನಿವಾಸಿಗಳು, ಬೆಂಗಳೂರು ಪ್ರವಾಸದ ಹಿನ್ನೆಲೆ ಹೊಂದಿರುವ 40 ವರ್ಷದ ಪುರುಷ, 23 ವರ್ಷದ ಯುವಕ , 50 ವರ್ಷದ ಪುರುಷನಲ್ಲಿ ಸೋಂಕು ದೃಢ ಪಟ್ಟಿದೆ.
ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆ ಮೈತ್ರಿನಗರ ಬಡಾವಣೆಯ ನಿವಾಸಿ, ಜ್ವರದಿಂದ ಬಳಲುತ್ತಿದ್ದ 57 ವರ್ಷದ ಮಹಿಳೆಯಲ್ಲಿ, ಜ್ವರದಿಂದ ಬಳಲುತ್ತಿದ್ದ 46 ವರ್ಷದ ಪುರುಷನಲ್ಲಿ ಸೋಂಕು ದೃಢ ಪಟ್ಟಿದೆ.
ಸೋಮವಾರಪೇಟೆ ತಾಲೂಕಿನ ಅಭ್ಯತ್‍ಮಂಗಲ ಗ್ರಾಮದ ಜ್ಯೋತಿನಗರದ ನಿವಾಸಿ, ಜ್ವರಕ್ಕೆ ತುತ್ತಾಗಿದ್ದ 55 ವರ್ಷದ ಪುರುಷನಲ್ಲಿ, ಬೆಂಗಳೂರು ಪ್ರವಾಸದ ಹಿನ್ನೆಲೆ ಹೊಂದಿರುವ, ಜ್ವರದಿಂದ ಬಳಲುತ್ತಿರುವ ಶನಿವಾರಸಂತೆ ಕಾವೇರಿ ಶಾಲೆ ಸಮೀಪದ ನಿವಾಸಿ 39 ವರ್ಷದ ಪುರುಷ, ಬಸವನಹಳ್ಳಿ ಗ್ರಾಮದ ನಿವಾಸಿ, ಬೆಂಗಳೂರು ಪ್ರವಾಸದ ಹಿನ್ನೆಲೆಯ 28 ವರ್ಷದ ಮಹಿಳೆಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.







