ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 84 ಮಂದಿಗೆ ಕೊರೋನ ಸೋಂಕು ದೃಢ

ಉಡುಪಿ, ಜು.17: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು, ಶುಕ್ರವಾರ 84 ಮಂದಿ ಕೋವಿಡ್ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ. ಇಂದು 309 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಶುಕ್ರವಾರ ಕೊರೋನ ಸೋಂಕು ಪತ್ತೆಯಾದ 84 ಮಂದಿಯಲ್ಲಿ ಉಡುಪಿ ತಾಲೂಕಿನ 33 ಮಂದಿ, ಕುಂದಾಪುರ ತಾಲೂಕಿನ 40 ಮಂದಿ ಹಾಗೂ ಕಾರ್ಕಳ ತಾಲೂಕಿನ 11 ಮಂದಿ ಸೇರಿದ್ದಾರೆ. 47 ಪುರುಷರು, 32 ಮಹಿಳೆಯರು ಹಾಗೂ 10 ವರ್ಷದೊಳಗಿನ ಪ್ರಾಯದ ಮೂವರು ಬಾಲಕರು ಹಾಗೂ ಇಬ್ಬರು ಬಾಲಕಿಯರು ಸೇರಿದಂತೆ ಒಟ್ಟು ಐದು ಮಂದಿ ಮಕ್ಕಳು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ ಎಂದ ಡಿಎಚ್‌ಓ, ಇಂದಿನ 84 ಪಾಸಿಟಿವ್ ಪ್ರಕರಣ ಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದರ ಸಂಖ್ಯೆ 1979ಕ್ಕೇರಿದೆ ಎಂದರು.
ಇಂದು ಪಾಸಿಟಿವ್ ಬಂದವರಲ್ಲಿ 7 ಮಂದಿ ಮುಂಬೈಯಿಂದ, ಆರು ಮಂದಿ ಬೆಂಗಳೂರಿನಿಂದ, ಮೂವರು ಮಂಗಳೂರಿನಿಂದ, ತಲಾ ಒಬ್ಬರು ದುಬೈ ಮತ್ತು ಅಬುದಾಬಿಯಿಂದ ಬಂದವರಾದರೆ, 13 ಮಂದಿ ಶೀತಜ್ವರ ದಿಂದ, ನಾಲ್ವರು ಉಸಿರಾಟದ ತೊಂದರೆಯಿಂದ ಬಳಲುತಿದ್ದರು. ಉಳಿದ 49 ಮಂದಿ ಜಿಲ್ಲೆಯಲ್ಲಿ ಈಗಾಗಲೇ ಸೋಂಕಿಗೆ ಪಾಸಿಟಿವ್ ಬಂದ ಪ್ರಾಥಮಿಕ ಸಂಪರ್ಕಿತರಾದವರಾಗಿದ್ದಾರೆ ಎಂದು ಡಾ.ಸೂಡ ವಿವರಿಸಿದರು.
ಇಂದಿನ ಪಾಸಿಟಿವ್‌ನೊಂದಿಗೆ ಉಡುಪಿ ಜಿಲ್ಲೆ 1979 ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿದೆ. ಬೆಂಗಳೂರು ನಗರ 27,496 ಪ್ರಕರಣಗಳೊಂದಿಗೆ ಮೊದಲನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ 2797 ಕೇಸುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕಲಬುರಗಿ 2592 ಕೇಸುಗಳೊಂದಿಗೆ ಮೂರನೇ, ಬಳ್ಳಾರಿ 2200ರೊಂದಿಗೆ ನಾಲ್ಕನೇ ಸ್ಥಾನಗಳಲ್ಲಿವೆ. ಉಳಿದಂತೆ ಧಾರವಾಡ 1731, ಯಾದಗಿರಿ 1539, ಮೈಸೂರು 1413, ಬೀದರ್ 1260 ಹಾಗೂ ವಿಜಯಪುರ 1238 ಪಾಸಿಟಿವ್ ಪ್ರಕರಣಗಳೊಂದಿಗೆ ಆರರಿಂದ 10ರವರೆಗಿನ ಸ್ಥಾನಗಳನ್ನು ಪಡೆದಿವೆ.
81 ಮಂದಿ ಗುಣಮುಖ: ಜಿಲ್ಲೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾದ 81 ಮಂದಿ ಇಂದು ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ ಉಡುಪಿಯ ಟಿಎಂಎ ಪೈ ಆಸ್ಪತ್ರೆಯಿಂದ 12 ಹಾಗೂ ಕುಂದಾಪುರದ ಸರಕಾರಿ ಆಸ್ಪತ್ರೆಯಿಂದ 69 ಮಂದಿ ಬಿಡುಗಡೆಗೊಂಡವರಲ್ಲಿ ಸೇರಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಗೊಂಡವರ ಸಂಖ್ಯೆ 1543ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 429 ಮಂದಿ ಜಿಲ್ಲೆಯಲ್ಲಿ ಇನ್ನೂ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ.
213 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಶುಕ್ರವಾರ ಇನ್ನೂ 213 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಸಂಪರ್ಕಿತರು 153 ಮಂದಿ ಇದ್ದರೆ, ಉಸಿರಾಟ ತೊಂದರೆಯ ಮೂವರು, ಶೀತಜ್ವರದಿಂದ ಬಳಲುವ 55 ಮಂದಿ ಹಾಗೂ ದೇಶ-ವಿದೇಶಗಳ ವಿವಿಧ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಇಬ್ಬರ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.
ಇಂದು ಪಡೆದ ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 23,858ಕ್ಕೇರಿದೆ. ಇವುಗಳಲ್ಲಿ ಈವರೆಗೆ 21,465 ನೆಗೆಟಿವ್, 1979 ಪಾಸಿಟಿವ್ ಬಂದಿವೆ. ಈವರೆಗೆ ಜಿಲ್ಲೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಇನ್ನು ಒಟ್ಟು 414 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ. ಇಂದು 32 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ 15 ಮಂದಿ ಕೋವಿಡ್ ಶಂಕಿತರು, 12 ಮಂದಿ ಉಸಿರಾಟ ತೊಂದರೆ ಯವರು ಹಾಗೂ ಐವರು ಶೀತಜ್ವರದಿಂದ ಬಳಲುವವರು ಸೇರಿದ್ದಾರೆ ಎಂದರು.
ಜಿಲ್ಲೆಯ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗಳಿಂದ ಇಂದು 24 ಮಂದಿ ಬಿಡುಗಡೆಗೊಂಡಿದ್ದು, 163 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಕೊರೋನ ಸೋಂಕಿನ ಗುಣಲಕ್ಷಣದ 195 ಮಂದಿ ಸೇರಿದಂತೆ ಒಟ್ಟು 6999 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 2124 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಕುಂದಾಪುರದಲ್ಲಿ ಮತ್ತೊಂದು ಕೋವಿಡ್ ಸಾವು
ಕುಂದಾಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಎರಡು ದಿನಗಳಿಂದ ಶ್ವಾಸಕೋಶದ ತೊಂದರೆ ಹಾಗೂ ತೀವ್ರ ಉಸಿರಾಟದ ತೊಂದರೆಗಾಗಿ ಚಿಕಿತ್ಸೆ ಪಡೆಯುತಿದ್ದು, ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದ 80ರ ಹರೆಯದ ಹಿರಿಯ ನಾಗರಿಕರು ಇಂದು ಮುಂಜಾನೆ 6:15 ಗಂಟೆಗೆ ಮೃತಪಟ್ಟಿದ್ದಾರೆ.
ಕಿರಿಮಂಜೇಶ್ವರ ಬಳಿಯ ಈ ಹಿರಿಯ ನಾಗರಿಕರು ತೀವ್ರ ಅಸ್ವಸ್ಥದಿಂದ ಬಳಲುತಿದ್ದು, ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಇದರಿಂದ ಅವರಿಗೆ ಅದೇ ಆಸ್ಪತ್ರೆಯ ಐಸಿಯು ವಾರ್ಡಿನಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಈ ನಡುವೆ ಅವರ ಕೊರೋನ ಪರೀಕ್ಷೆ ಪಾಸಿಟಿವ್ ಬಂದಿತ್ತು. ಆದರೆ ಇಂದು ಮುಂಜಾನೆ ಅವರು ಮೃತಪಟ್ಟರೆಂದು ಡಿಎಚ್‌ಓ ತಿಳಿಸಿದರು.
9ನೇ ಸಾವು: ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 9 ಮಂದಿ ಕೋವಿಡ್‌ಗೆ ಬಲಿಯಾದಂತಾಗಿದೆ ಎಂದು ಡಾ.ಸೂಡ ತಿಳಿಸಿದರು. ಮೊದಲ ಮೂರು ಸಾವು ಮುಂಬಯಿಯಿಂದ ಊರಿಗೆ ಮರಳಿ ಬಂದವರದ್ದಾಗಿದ್ದರೆ, ಉಳಿದ ಆರು ಮಂದಿ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕಿತ ಸ್ಥಳೀಯರದ್ದಾಗಿದೆ. ಇವರಲ್ಲಿ ತಲಾ ಇಬ್ಬರು ಡಾ.ಟಿಎಂಎ ಪೈ ಹಾಗೂ ಮಣಿಪಾಲ ಕೆಎಂಸಿಯಲ್ಲಿ ಮೃತಪಟ್ಟರೆ, ತಲಾ ಒಬ್ಬರು ನಗರದ ಮತ್ತೊಂದು ಖಾಸಗಿ ಆಸ್ಪತ್ರೆ ಹಾಗೂ ಇಂದು ಕುಂದಾಪುರದಲ್ಲಿ ಮೃತಪಟ್ಟಿದ್ದಾರೆ ಎಂದವರು ತಿಳಿಸಿದರು.







