ಪ್ರಧಾನಿ ಪ್ರಶಂಸಿಸಿದ ಕಲ್ಮನೆ ಕಾಮೇಗೌಡರದ್ದು ಕಟ್ಟು ಕಥೆಯೇ ?
ಆರೋಪಗಳ ಬಗ್ಗೆ ಅವರು ಹೇಳಿದ್ದು ಹೀಗೆ...

ಮಂಡ್ಯ, ಜು.17: ಮಳವಳ್ಳಿ ತಾಲೂಕು ದಾಸನದೊಡ್ಡಿ ಸಮೀಪದ ಕುಂದನ ಪರ್ವತದಲ್ಲಿ ನಾನು ನಿರ್ಮಿಸಿರುವ ಕಟ್ಟೆಗಳು, ಬೆಳೆಸಿರುವ ಮರಗಿಡಗಳು ನನ್ನ ಕಾಯಕ ಏನೆಂಬುದಕ್ಕೆ ಸಾಕ್ಷಿಯಾಗಿವೆ. 60 ವರ್ಷದಿಂದ ಕುಂದನಬೆಟ್ಟದ ತಪ್ಪಲಿನಲ್ಲಿ ಕಾಯಕ ಮಾಡಿಕೊಂಡು ಜೀವನಸಾಗಿಸುತ್ತಿದ್ದೇನೆ ಎಂದು ಬಸವಶ್ರೀ ಪುರಸ್ಕೃತ ಪರಿಸರ ಸಂರಕ್ಷಕ ಕಲ್ಮನೆ ಕಾಮೇಗೌಡ ಸ್ಪಷ್ಟಪಡಿಸಿದ್ದಾರೆ.
ತನ್ನ ವಿರುದ್ಧ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮಳವಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಲ್ಲದ ಆರೋಪಕ್ಕೆ ತೀವ್ರ ಬೇಸರವಾಗಿದೆ. ಈ ರೀತಿ ಅರೋಪಗಳ ಪರಿಣಾಮ ಭವಿಷ್ಯದಲ್ಲಿ ಯಾರೂ ಕೆರೆಕಟ್ಟೆ ನಿರ್ಮಿಸಲು ಮುಂದೆ ಬರುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪುಂಡಪೋಕರಿಗಳ ಜೂಜು ಆಡ್ಡೆಯಾಗಿದ್ದ ಕುಂದನಬೆಟ್ಟದಲ್ಲಿ ಮರ ಗಿಡಗಳನ್ನು ನೆಟ್ಟು ಪೋಷಣೆ ಮಾಡುವುದರೊಂದಿಗೆ, ಕಟ್ಟೆಗಳನ್ನು ನಿರ್ಮಿಸಿ ಸಕಲ ಜೀವರಾಶಿಗಳಿಗೂ ನೀರುಣಿಸುತ್ತಿದ್ದೇನೆ. ಇದಕ್ಕೆ ನೀಡಿದ ಪುರಸ್ಕಾರಗಳ ಹಣವನ್ನು ಸಹ ಕಟ್ಟೆಗಳ ನಿರ್ಮಾಣಕ್ಕೆ ಬಳಸಿದ್ದೆನೆ. ಸ್ವಾರ್ಥಕ್ಕೆ ನಾನು ಏನು ಮಾಡಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬೆಟ್ಟದ ತಪ್ಪಲಿನಲ್ಲಿ ಬೆಳೆಸಿದ ಮರಗಳನ್ನು ಕತ್ತರಿಸಿ ಕಾಮಗಾರಿ ಮಾಡುತ್ತಿದ್ದರು. ಅದನ್ನು ತಡೆದ ನನ್ನ ಮೇಲೆ ಹಲ್ಲೆ ಮಾಡಿದರು. ಈ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಕಾಮಗಾರಿ ನಡೆಸುವ ಗುತ್ತಿಗೆದಾರ ಕಿಡಿಗೇಡಿಗಳ ಗುಂಪು ಕಟ್ಟಿಕೊಂಡು ನನ್ನ ವಿರುದ್ದ ದೂರು ನೀಡಿದ್ದಾರೆ ಎಂದು ಅವರು ಆರೋಪಿಸಿದರು.
ಜಿಲ್ಲಾಧಿಕಾರಿಗಳು ನನ್ನ ಅರೋಗ್ಯದ ಬಗ್ಗೆ ತೀವ್ರ ಕಾಳಜಿವಹಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಬೇರೆಯವರಿಗೆ ತೊಂದರೆ ಆಗಬಾರದೆಂದು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದೇನೆ. ಆದರೆ, ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವುದರಿಂದ ನನಗೆ ಯಾವ ಚಿಕಿತ್ಸೆಯೂ ಬೇಡವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುತ್ರ ಬಲರಾಂ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.







