ಕೋವಿಡ್19: ಬೆಂಗಳೂರಿನಲ್ಲಿ ಒಂದೇ ದಿನ 75 ಮಂದಿ ಸಾವು
2,208 ಜನರಿಗೆ ಪಾಸಿಟಿವ್; ಸೋಂಕಿತರ ಸಂಖ್ಯೆ 27,496ಕ್ಕೆ ಏರಿಕೆ

ಬೆಂಗಳೂರು, ಜು.17: ನಗರದಲ್ಲಿ ಶುಕ್ರವಾರ ಒಂದೇ ದಿನ 2,208 ಜನರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಸೋಂಕಿಗೆ 75 ಜನರು ಮೃತರಾಗಿದ್ದು, ನಗರದಲ್ಲಿ ಸೋಂಕಿತರ ಸಂಖ್ಯೆ 27,496ಕ್ಕೆ ಏರಿಕೆಯಾಗಿದೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 20,623 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 333 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ನಗರದಲ್ಲಿ 582 ಜನರು ಸೋಂಕಿಗೆ ಬಲಿಯಾಗಿದ್ದು, 6290 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಶುಕ್ರವಾರ ಕೂಡ 338 ಜನರು ಗುಣಮುಖರಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 27,801 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.
ಅಂತ್ಯ ಸಂಸ್ಕಾರಕ್ಕೆ ತಡೆ
ಕೊರೋನಗೆ ಬಲಿಯಾದವರ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ಹರಸಾಹಸ ಪಡುವ ಘಟನೆಗಳು ಮತ್ತೆ ಮರುಕಳಿಸುತ್ತಿವೆ.
ಬಸವೇಶ್ವರ ನಗರದ 86 ವರ್ಷದ ನಿವಾಸಿಯು ಸೋಮವಾರ ಕೊರೋನ ಸೋಂಕಿಗೆ ಬಲಿಯಾಗಿದ್ದರು. ಸ್ವಾಬ್ ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಮೃತರ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ಎಂ.ಎಸ್ ಪಾಳ್ಯಕ್ಕೆ ಹೋಗಿದ್ದಾರೆ. ಆದರೆ, ಅಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಎಷ್ಟೇ ಪ್ರಯತ್ನಪಟ್ಟರೂ ಅಲ್ಲಿ ಅಂತ್ಯಕ್ರಿಯೆ ಮಾಡಲಾಗದೆ ಕುಟುಂಬಸ್ಥರು ಸ್ಥಳೀಯರ ಸಹಾಯದಿಂದ ಸಂಜೆವರೆಗೂ ಜೆ.ಸಿ ರಸ್ತೆಯ ಖಬರಸ್ತಾನ್ ನಲ್ಲಿ ಮೃತದೇಹವಿಟ್ಟು ಕಾದಿದ್ದು, ನಂತರ ಹೊಸೂರು ರಸ್ತೆಯ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ವಾರವಾದರೂ ಬಾರದ ವರದಿ
ಕೊರೋನ ವರದಿ ನೀಡುವಲ್ಲಿ ಖಾಸಗಿ ಆಸ್ಪತ್ರೆಗಳು ತಡ ಮಾಡುತ್ತಿದ್ದು, ಪರೀಕ್ಷೆಗೆ ಒಳಪಟ್ಟು ವಾರವಾದರೂ ವರದಿ ನೀಡದೇ ಸತಾಯಿಸುತ್ತಿರುವ ಪ್ರಕರಣಗಳು ಮಹಾನಗರದಲ್ಲಿ ಹೆಚ್ಚಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ವ್ಯಕ್ತಿಯೊಬ್ಬರು ಏಳು ದಿನಗಳ ಹಿಂದೆ ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊರೋನ ಪರೀಕ್ಷೆಗೆ ಒಳಪಟ್ಟಿದ್ದರು. ವಾರವಾದರೂ ವರದಿ ನೀಡಿಲ್ಲ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಉಡಾಫೆ ಉತ್ತರ ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.







