ಭಾರತ, ಚೀನಾ ಜನರ ಶಾಂತಿಗಾಗಿ ಏನು ಮಾಡಲೂ ಸಿದ್ಧ: ಟ್ರಂಪ್

ವಾಶಿಂಗ್ಟನ್, ಜು. 17: ಭಾರತ ಮತ್ತು ಚೀನಾಗಳ ಜನರಿಗೆ ಶಾಂತಿಯನ್ನು ಒದಗಿಸುವುದಕ್ಕಾಗಿ ಸಾಧ್ಯವಿರುವ ಎಲ್ಲವನ್ನು ಮಾಡಲು ನಾನು ಬಯಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು ಅವರ ವಕ್ತಾರೆ ಹಾಗೂ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಲೀ ಮೆಕೆನಾನಿ ತಿಳಿಸಿದ್ದಾರೆ.
‘‘ನಾನು ಭಾರತದ ಜನರನ್ನು ಪ್ರೀತಿಸುತ್ತೇನೆ, ನಾನು ಚೀನಾದ ಜನರನ್ನು ಪ್ರೀತಿಸುತ್ತೇನೆ ಹಾಗೂ ಆ ಜನರ ನಡುವೆ ಶಾಂತಿಯನ್ನು ಏರ್ಪಡಿಸುವುದಕ್ಕಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡಲು ನಾನು ಬಯಸಿದ್ದೇನೆ ಎಂದು ಅವರು (ಟ್ರಂಪ್) ಹೇಳಿದ್ದಾರೆ’’ ಎಂದು ಶ್ವೇತಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಹೇಳಿದರು.
ಇತ್ತೀಚೆಗೆ ಲಡಾಖ್ನಲ್ಲಿರುವ ವಾಸ್ತವ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ಬಳಿಕ, ಟ್ರಂಪ್ ಭಾರತಕ್ಕೆ ನೀಡಿದ ಸಂದೇಶಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.
‘ಭಾರತ ಅಮೆರಿಕದ ಶ್ರೇಷ್ಠ ಮಿತ್ರ’
ಗುರುವಾರ ಇದಕ್ಕೂ ಮುನ್ನ ಮಾತನಾಡಿದ ಶ್ವೇತಭವನದ ಆರ್ಥಿಕ ಸಲಹೆಗಾರ ಲ್ಯಾರಿ ಕಡ್ಲೋ, ಭಾರತವು ಅಮೆರಿಕದ ಶ್ರೇಷ್ಠ ಮಿತ್ರ ಎಂಬುದಾಗಿ ಬಣ್ಣಿಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿಯ ಅತ್ಯುತ್ತಮ ಸ್ನೇಹಿತ ಎಂಬುದಾಗಿಯೂ ಅವರು ಈ ಸಂದರ್ಭದಲ್ಲಿ ಹೇಳಿದರು.







