"ಕೋವಿಡ್ ಉಪಕರಣ ಖರೀದಿಯಲ್ಲಿ ನಡೆದ ಭ್ರಷ್ಟಾಚಾರದ ಹಿಂದೆ ಪ್ರಭಾವಿ ಸಚಿವರ ಕೈವಾಡ"
ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್

ಶಿವಮೊಗ್ಗ, ಜು.18: ಕೋವಿಡ್-19 ಉಪಕರಣಗಳ ಖರೀದಿಯಲ್ಲಿ ನಡೆದ ಭಾರೀ ಭ್ರಷ್ಟಾಚಾರದ ಹಿಂದೆ ಪ್ರಭಾವಿ ಸಚಿವರೊಬ್ಬರ ಕೈವಾಡವಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಉಪಕರಣಗಳ ಖರೀದಿಯಲ್ಲಿ ಭಾರೀ ಅವ್ಯವಹಾರವಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಲೇ ಬಂದಿದೆ. ಪಿಪಿಇ ಕಿಟ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರಿನಿಂಗ್ ಉಪ ಕರಣ ಸೇರಿದಂತೆ ವೆಂಟಿಲೇಟರ್ ಖರೀದಿಯಲ್ಲೂ ಕೂಡ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿರುವ ಪದ್ಮಾಂಬ ಡಯಾಗ್ನಾಸ್ಟಿಕ್ ಸೆಂಟರ್, ಮಂಜುನಾಥ ಲ್ಯಾಬ್ ಸೇರಿದಂತೆ ಕೆಲವು ಲ್ಯಾಬ್‌ಗಳು ಸಚಿವರ ಸಂಬಂಧಿಕರ ಹೆಸರಿನಲ್ಲಿವೆ. ಅಲ್ಲದೇ ವೆಂಟಿಲೇಟರ್ ಖರೀದಿಯಲ್ಲಿ ಶೇ.60ರಷ್ಟು ಹಣ ಲೂಟಿಯಾಗಿದೆ. ಮಾರುಕಟ್ಟೆ ದರಕ್ಕಿಂತ ಮೂರುಪಟ್ಟು ಹಣ ಪಾವತಿಸಿ ಖರೀದಿಸಲಾಗಿದೆ. ಇದರಲ್ಲಿ ಪ್ರಭಾವಿ ಸಚಿವರ ಪ್ರಭಾವವಿದ್ದು, ಕಮೀಷನ್‌ಗಾಗಿ ನಿಯಮಗಳನ್ನೇ ಉಲ್ಲಂಘಿಸಲಾಗಿದೆ ಎಂದು ದೂರಿದರು.
ಈ ಎಲ್ಲ ಉಪಕರಣಗಳ ಖರೀದಿಯಲ್ಲಿ ನಡೆದ ಭ್ರಷ್ಟಾಚಾರವನ್ನು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದರೂ ಕೂಡ ಇದುವರೆಗೂ ಯಾವುದೇ ತನಿಖೆ ನಡೆಸಿಲ್ಲ. ಆದ್ದರಿಂದ ತಕ್ಷಣವೇ ಲೆಕ್ಕಪತ್ರ ನೀಡುವುದರ ಮೂಲಕ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲೂ ಕೂಡ ಕೊರೋನ ನಿಯಂತ್ರಣವಾಗಿಲ್ಲ. ಜಿಲ್ಲೆಗೆ ಎಷ್ಟು ಹಣ ಬಂದಿವೆ. ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂಬ ಮಾಹಿತಿಯೂ ಇಲ್ಲ. ಇಲ್ಲೂ ಕೂಡ ಅವ್ಯವಹಾರದ ವಾಸನೆ ಇದೆ. ಜಿಲ್ಲಾಡಳಿತ ತಕ್ಷಣವೇ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ಏನೇನು ಖರೀದಿಸಲಾಗಿದೆ ಎಂದು ಸಾರ್ವಜನಿಕರಿಗೆ ತಿಳಿಸಬೇಕು. ಕಾಂಗ್ರೆಸ್ ಪಕ್ಷ ಸುಳ್ಳು ಆರೋಪ ಮಾಡುತ್ತಿಲ್ಲ. ಎಲ್ಲ ದಾಖಲೆಗಳು ನಮ್ಮ ಬಳಿ ಇವೆ ಎಂದ ಅವರು, ಈ ಬಗ್ಗೆ ಲೆಕ್ಕಪತ್ರ ಕೊಡದೇ ಹೋದರೆ ಜಿಲ್ಲಾಡಳಿತ ಅನುಮತಿ ನೀಡಿದರೆ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾದ್ಯಂತ ಮಂಗಳವಾರದಿಂದ ಅಭಿಯಾನದ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದರು.
ಕೋವಿಡ್-19 ನಿಯಂತ್ರಣಕ್ಕೆ ಕಾಂಗ್ರೆಸ್ ಪಕ್ಷ ಯಾವಾಗಲೂ ಸಹಕಾರ ನೀಡುತ್ತಿದೆ. ಸರ್ಕಾರದ ಜೊತೆ ನಾವಿದ್ದೇವೆ. ಆದರೆ ಇಂತಹ ಅವ್ಯವಹಾರಗಳನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ ಮತ್ತು ಕಟ್ಟುನಿಟ್ಟಾಗಿ ನಿಯಂತ್ರಣ ಮಾಡಲು ಅಧಿಕಾರಿಗಳಿಗೆ ಆದೇಶ ಮಾಡಬೇಕು. ಈ ಹಿಂದೆ ನಾವು ಪ್ರತಿ ತಾಲೂಕಿಗೆ 50 ಹಾಸಿಗೆಯಂತೆ ಕೋರೊನ ಸೋಂಕಿತರಿಗೆ ಮೀಸಲಿಡಬೇಕು ಹಾಗೂ ಇತರೆ ಸಲಹೆಗಳನ್ನು ನೀಡಿದ್ದೇವು, ಆದರೆ ಅಧಿಕಾರಿಗಳು ಯಾವುದನ್ನೂ ಪಾಲಿಸುತ್ತಿಲ್ಲ ಎಂದು ದೂರಿದರು.







