`ಕೊರೊನಿಲ್' ಟ್ರೇಡ್ ಮಾರ್ಕ್ ಬಳಸದಂತೆ ಪತಂಜಲಿಗೆ ಮದ್ರಾಸ್ ಹೈಕೋರ್ಟ್ ಆದೇಶ

ಚೆನ್ನೈ : ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯು ಬಿಡುಗಡೆಗೊಳಿಸಿರುವ ಔಷಧಿ- ಕೊರೊನಿಲ್ ಟ್ರೇಡ್ ಮಾರ್ಕ್ ಬಳಸದಂತೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಮಧ್ಯಂತರ ಆದೇಶವನ್ನು ಹೊರಡಿಸಿದ ಜಸ್ಟಿಸ್ ಸಿ ವಿ ಕಾರ್ತಿಕೇಯನ್, ಈ ಆದೇಶ ಜುಲೈ 30ರ ತನಕ ಜಾರಿಯಲ್ಲಿರುತ್ತದೆ ಎಂದಿದ್ದಾರೆ. ಚೆನ್ನೈ ಮೂಲದ ಅರುದ್ರಾ ಇಂಜಿನಿಯರಿಂಗ್ ಕಂಪೆನಿ ಅಪೀಲು ಸಲ್ಲಿಸಿ ಕೊರೊನಿಲ್ ಎಂಬ ಹೆಸರಿನ ಟ್ರೇಡ್ ಮಾರ್ಕ್ ಅನ್ನು ತಮ್ಮ ಸಂಸ್ಥೆ 1993ರಿಂದ ಹೊಂದಿತ್ತು ಎಂದಿತ್ತು. ಘನ ಯಂತ್ರಗಳು ಮತ್ತಿತರ ವಸ್ತುಗಳನ್ನು ಸ್ವಚ್ಛಗೊಳಿಸಲು ಬಳಸಲಾಗುವ ರಾಸಾಯನಿಕಗಳು ಹಾಗೂ ಸ್ಯಾನಿಟೈಸರ್‍ಗಳ ಉತ್ಪಾದನೆಯಲ್ಲಿ ತೊಡಗಿರುವ ಕಂಪೆನಿಯ ಪ್ರಕಾರ ಅದು `ಕೊರೊನಿಲ್-212 ಎಸ್‍ಪಿಎಲ್' ಹಾಗೂ `ಕೊರೊನಿಲ್ 92ಬಿ' ಎಂಬ ಎರಡು ಹೆಸರುಗಳನ್ನು 1993ರಲ್ಲಿಯೇ ನೋಂದಣಿಗೊಳಿಸಿ ಅದನ್ನು ಪ್ರತಿ ವರ್ಷ ನವೀಕರಿಸುತ್ತಿದೆ.
``ನಾವು ಹೊಂದಿರುವ ಈ ಟ್ರೇಡ್ ಮಾರ್ಕ್ ಹಕ್ಕು 2027ರ ತನಕ ಊರ್ಜಿತದಲ್ಲಿರುತ್ತದೆ,'' ಎಂದು ಕಂಪೆನಿ ಹೇಳಿದೆ. ತನ್ನ ವಾದ ಪುಷ್ಠೀಕರಿಸಲು ಸಂಸ್ಥೆ ತನ್ನ ಉತ್ಪನ್ನಗಳ ಕಳೆದ ಐದು ವರ್ಷಗಳ ಬಿಲ್ ಗಳನ್ನೂ ಹಾಜರು ಪಡಿಸಿತ್ತು.





