ಬಳ್ಳಾರಿ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಗೊಳಿಸುವ ಬಗ್ಗೆ ಸಚಿವ ಆನಂದ್ ಸಿಂಗ್ ಸ್ಪಷ್ಟನೆ

ಬಳ್ಳಾರಿ, ಜು.18: ಬಳ್ಳಾರಿ ಜಿಲ್ಲೆಯಲ್ಲಿ ಸದ್ಯಕ್ಕೆ ಲಾಕ್‍ಡೌನ್ ಅನ್ನು ಜಾರಿಗೊಳಿಸಲ್ಲ. ಆದರೆ, ಲಾಕ್‍ಡೌನ್ ವಿಧಿಸಲಾಗಿರುವ ಜಿಲ್ಲೆಗಳಲ್ಲಿ ಕೊರೋನ ಸೋಂಕಿನ ಹರಡುವಿಕೆಯ ಪ್ರಮಾಣದಲ್ಲಾದ ಬದಲಾವಣೆಗಳನ್ನು ಪರಿಶೀಲಿಸಿದ ಬಳಿಕ ನಮ್ಮಲ್ಲಿ ಅದನ್ನು ಜಾರಿಗೆ ತರಬೇಕೇ ಅಥವಾ ಬೇಡವೇ ಎಂಬುದನ್ನು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಶನಿವಾರ ಬಳ್ಳಾರಿ ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಕೊರೋನ ಸ್ಥಿತಿಗತಿ ಮತ್ತು ಸೋಂಕು ಪ್ರಮಾಣ ಹರಡುವಿಕೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಭಾಗವಹಿಸಿದ್ದ ಶಾಸಕರ ಅಭಿಪ್ರಾಯಗಳನ್ನು ಆಲಿಸಿ ನಿರ್ಧಾರ ಪ್ರಕಟಿಸಿದರು.
ಬಳ್ಳಾರಿ ಜಿಲ್ಲೆಯನ್ನು ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದರೆ ಇನ್ನೂ 15 ದಿನಗಳ ಕಾಲ ಕೊರೋನ ಸೋಂಕಿತರ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಪ್ರತಿ ನಿತ್ಯ ದುಡಿದು ತಮ್ಮ ಜೀವನ ನಡೆಸುವ ಜನರನ್ನು ಕಷ್ಟಕ್ಕೆ ತಳ್ಳಬಾರದು ಎಂಬ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆಂಧ್ರ ಪ್ರದೇಶಕ್ಕೆ ಬಸ್ ಸಂಚಾರ ಬಂದ್ ಮಾಡುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ ಸಚಿವ ಆನಂದ್ ಸಿಂಗ್ ಅವರು, ಜು.21ರಂದು ಬೆಳಗ್ಗೆ 11ಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಟ್ರಾಮಕೇರ್ ಸೆಂಟರ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಜಿಂದಾಲ್‍ನಲ್ಲಿ ತಪಾಸಣಾ ಪ್ರಮಾಣ ಹೆಚ್ಚಳವಾಗಲಿ: ಜಿಂದಾಲ್‍ನಲ್ಲಿ ಇದುವರೆಗೆ 5500 ಸಿಬ್ಬಂದಿಗಳಿಗೆ ಮಾತ್ರ ತಪಾಸಣೆ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಆನಂದ್ ಸಿಂಗ್ ಅವರು ಕೂಡಲೇ ಜಿಂದಾಲ್‍ನಲ್ಲಿ ತಪಾಸಣಾ ಪ್ರಮಾಣ ಹೆಚ್ಚಿಸಬೇಕು. 10 ಸಾವಿರ ಆ್ಯಂಟಿಜೆನ್ ಕಿಟ್‍ಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಖರೀದಿಸಿ ತಪಾಸಣೆ ನಡೆಸಿ ಎಂದು ಖಡಕ್ ಸೂಚನೆ ನೀಡಿದರು.
ಬಳ್ಳಾರಿ ಜಿಲ್ಲೆಯಲ್ಲಿ 2200 ಕೊರೋನ ಸೋಂಕು ದೃಢಪಟ್ಟಿದ್ದು, 939 ಪ್ರಕರಣಗಳು ಸಕ್ರಿಯವಾಗಿವೆ. 54 ಜನರು ಸಾವನ್ನಪ್ಪಿದ್ದಾರೆ ಮತ್ತು 142 ಜನರು ಹೋಂ ಐಸೋಲೇಶನ್‍ನಲ್ಲಿರಿಸಲಾಗಿದೆ ಎಂದು ಡಿಸಿ ನಕುಲ್ ಅವರು ಸಚಿವರ ಗಮನಕ್ಕೆ ತಂದರು.
ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ಸೈಯದ್ ನಾಸೀರ್ ಹುಸೇನ್, ಶಾಸಕರಾದ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ನಿತೀಶ್ ಮತ್ತಿತರರು ಇದ್ದರು.







