ಬೀದಿ ವ್ಯಾಪಾರಕ್ಕೆ ಅನುಮತಿ ನೀಡಲು ಒತ್ತಾಯಿಸಿ ವ್ಯಾಪಾರಿಗಳ ಧರಣಿ

ಬೆಂಗಳೂರು, ಜು.18: ಲಾಕ್‍ಡೌನ್ ನಿಯಮ ಪಾಲನೆಯೊಂದಿಗೆ ನಗರ ಭಾಗಗಳಲ್ಲಿ ಬೀದಿ ವ್ಯಾಪಾರಕ್ಕೆ ರಾಜ್ಯ ಸರಕಾರ ಅನುಮತಿ ನೀಡಬೇಕೆಂದು ಆಗ್ರಹಿಸಿ ನಗರದ ವಿವಿಧೆಡೆ ಬೀದಿ ವ್ಯಾಪಾರಿಗಳು ಧರಣಿ ನಡೆಸಿದರು.
ಶನಿವಾರ ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ(ಎಐಸಿಸಿಟಿಯು) ಹಾಗೂ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ಇಲ್ಲಿನ ಯಶವಂತಪುರ ಮಾರುಕಟ್ಟೆ, ಮೂಡಲಪಾಳ್ಯ, ಗಾಲಿ ಆಂಜನೇಯ ದೇವಾಲಯ ಸೇರಿದಂತೆ ಹಲವು ಕಡೆ ಭಿತ್ತಿ ಪತ್ರಗಳನ್ನು ಹಿಡಿದು ಸಾವಿರಾರು ಬೀದಿ ವ್ಯಾಪಾರಿಗಳು ಧರಣಿ ನಡೆಸಿ, ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಕೋವಿಡ್-19 ನಿಯಂತ್ರಣಕ್ಕಾಗಿ ಲಾಕ್‍ಡೌನ್ ಘೋಷಿಸಿದ ಪರಿಣಾಮ ದಿನಗೂಲಿಯನ್ನೆ ನಂಬಿದ್ದ ಲಕ್ಷಾಂತರ ಬೀದಿ ವ್ಯಾಪಾರಿಗಳ ಬದುಕು ಕಷ್ಟಕರವಾಗಿದ್ದು, ಆಹಾರದ ತೊಂದರೆಯೂ ಉಂಟಾಗಿದೆ. ರಾಜ್ಯ ಸರಕಾರ ಜಾರಿಗೊಳಿಸಿರುವ ಲಾಕ್‍ಡೌನ್ ನಿಯಮ ಪಾಲನೆ ಮಾಡಲು ಬೀದಿ ವ್ಯಾಪಾರಿಗಳು ಸಿದ್ದರಿದ್ದಾರೆ. ಹೀಗಾಗಿ, ಅನುಮತಿ ನೀಡಬೇಕೆಂದು ಧರಣಿ ನಿರತ ವ್ಯಾಪಾರಿಗಳು ಕೋರಿದರು.
ರಾಜ್ಯ ಸರಕಾರ ಬೀದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಬೀದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ತಕ್ಷಣ ಬಿಡುಗಡೆ ಮಾಡುವ ಜತೆಗೆ ವ್ಯಾಪಾರಿಗಳಿಗೆ ಕೊರೋನ ಸೋಂಕು ದೃಢಪಟ್ಟರೆ, ಅವರಿಗೆ ಉಚಿತ ಮತ್ತು ಗುಣಮಟ್ಟದ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಬೇಕೆಂದು ಬೀದಿ ವ್ಯಾಪಾರಿಗಳು ಒತ್ತಾಯ ಮಾಡಿದರು.
ಸಾಂಕ್ರಾಮಿಕ ರೋಗ ತಡೆಗಟ್ಟಲು ಜಾರಿಯಿರುವ ನಿಯಮಗಳನ್ನು ಪಾಲಿಸುತ್ತಾ, ನಮ್ಮ ಜೀವನೋಪಾಯವನ್ನು ನಡೆಸಲು ಅನುಮತಿಯನ್ನು ನೀಡಬೇಕು ಮತ್ತು ಸೂಕ್ತ ಸೌಲಭ್ಯ ಕಲ್ಪಿಸಬೇಕು. ಅದೇ ರೀತಿ, ಬೀದಿ ವ್ಯಾಪಾರವನ್ನು ಪುನುಶ್ಚೇತನಗೊಳಿಸಲು ಮೂರು ತಿಂಗಳಿಗೆ ಸೇರಿದಂತೆ 15 ಸಾವಿರ ರೂ. ಸಹಾಯ ಧನ ಘೋಷಿಸಬೇಕೆಂದು ಆಗ್ರಹಿಸಿದರು.







