ಕುಡಿದು ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ಕೊಲೆ: ನಾಲ್ವರು ಆರೋಪಿಗಳ ಬಂಧನ

ದಾವಣಗೆರೆ, ಜು.18: ಪ್ರತಿ ದಿನ ಕುಡಿದು ಗಲಾಟೆ ಮಾಡುತ್ತಿದ್ದ ಎನ್ನುವ ಕಾರಣಕ್ಕೆ ಕೊಲೆ ಮಾಡಿ ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ನಿಟ್ಟೂರು ಗ್ರಾಮದ ಆರುಣಕುಮಾರ್ (19) ಕಿರಣ್ (20) ಸಂತೋಷ (27) ಶ್ರೀಮತಿ ರೂಪ (38) ಬಂಧಿತ ಆರೋಪಿಗಳು.
ಹರಿಹರ ತಾಲೂಕಿನ ನಿಟ್ಟೂರು ಗ್ರಾಮದ ಬಸಪ್ಪ ಎಂಬವರು ಜು.14 ರಂದು ತನ್ನ ಮನೆಯಲ್ಲಿಯೇ ಮೃತಪಟ್ಟಿದ್ದರು. ಈ ಬಗ್ಗೆ ಪತ್ನಿ ಪೊಲೀಸ್ ಠಾಣೆಗೆ ದೂರ ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಗ್ರಾಮಾಂತರ ಉಪವಿಭಾಗದ ಡಿವೈಎಸ್‍ಪಿ ಮಾರ್ಗದರ್ಶನದಲ್ಲಿ ಸಿಪಿಐ ಶಿವಪ್ರಸಾದ ಹಾಗೂ ಮಲೆಬೆನ್ನೂರು ಪಿಎಸ್‍ಐ ವೀರಬಸಪ್ಪ ಕುಸಲಾಪುರ ವಿಶೇಷ ತಂಡ ರಚಿಸಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾ ಕುಡಿದು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಹಿನ್ನಲೆಯಲ್ಲಿ ಬೇಸತ್ತು ಬಸಪ್ಪ ಅವರನ್ನು ಕೊಲೆ ಮಾಡಿ ನಂತರ ನೇಣು ಹಾಕಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೋಲಿಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.







