ಬ್ರಹ್ಮಾವರ: ಬೆಂಗಳೂರಿನಿಂದ ಬಂದವರಲ್ಲಿ ಕೊರೋನ ಪಾಸಿಟಿವ್
ಉಡುಪಿ, ಜು.18: ಬ್ರಹ್ಮಾವರ ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಒಟ್ಟು ಐವರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು, ಇವರಲ್ಲಿ ಮೂವರು ಬೆಂಗಳೂರಿನಿಂದ ಬಂದವರಾಗಿದ್ದು, ಅವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ ತಿಳಿಸಿದ್ದಾರೆ.
ಚಾಂತಾರಿನ 57 ವರ್ಷ ಪ್ರಾಯದ ವ್ಯಕ್ತಿ, ಶಿರಿಯಾರದ 30ರ ಹರೆಯದ ವ್ಯಕ್ತಿಯಲ್ಲಿ ಸಾಸಿಟಿವ್ ಕಂಡುಬಂದಿದ್ದು, ಇಬ್ಬರೂ ಬೆಂಗಳೂರಿನಿಂದ ಬಂದವರಾಗಿದ್ದಾರೆ. ಇನ್ನು ನಾಲ್ಕೂರಿನ 49ರ ಹರೆಯದ ಮಹಿಳೆಯಲ್ಲಿ ಪಾಸಿಟಿವ್ ಕಂಡುಬಂದಿದ್ದು, ಇವರ ಪತಿ ಬೆಂಗಳೂರಿನಿಂದ ಆಗಮಿಸಿದವರಾಗಿದ್ದಾರೆ ಎಂದರು.
ಇನ್ನುಳಿದಂತೆ ಶಿರಿಯಾದ 12ರ ಹರೆಯದ ಬಾಲಕನಲ್ಲಿ ಪಾಸಿಟಿವ್ ಪತ್ತೆಯಾಗಿದ್ದು, ಈತನ ಅಜ್ಜಿಯಲ್ಲಿ 10 ದಿನಗಳ ಹಿಂದೆ ಪಾಸಿಟಿವ್ ಕಾಣಿಸಿಕೊಂಡಿತ್ತು. ಅಲ್ಲದೇ ನೀಲಾವರ ಜೀವನ ನಗರದ 29ರ ಹರೆಯದ ಯುವಕನಲ್ಲಿ ಪಾಸಿಟಿವ್ ಕಂಡಿದ್ದು, ಈತ ಮಂಗಳೂರಿನಲ್ಲಿ ಕೆಲಸ ಮಾಡುತಿದ್ದಾನೆ. ಅದೇ ರೀತಿಯ ಹಂದಾಡಿಯ 34ರ ಹರೆಯದ ಪೊಲೀಸ್ ಸಿಬ್ಬಂದಿಯಲ್ಲೂ ಕೊರೋನ ಪಾಸಿಟಿವ್ ಕಾಣಿಸಿದೆ ಎಂದವರು ತಿಳಿಸಿದರು.
ಕೋಟ ಹೋಬಳಿಯ ಸಾಲಿಗ್ರಾಮದ ಒಬ್ಬನಲ್ಲಿ, ಹೇರಾಡಿಯಲ್ಲಿ ಒಬ್ಬನಲ್ಲಿ, ಹಕ್ಲಾಡಿಯಲ್ಲಿ ಒಬ್ಬನಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಿ, ಅವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಕೋಟದ ಆರ್‌ಐ ರಾಜು ತಿಳಿಸಿದರು.
ಬೈಂದೂರು-18: ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಇಂದು 18 ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ.ಯಡ್ತರೆಯಲ್ಲಿ 3, ಕಾಲ್ತೋಡಿನಲ್ಲಿ 1, ನಾಡ ಮತ್ತು ನಾವುಂದಗಳಲ್ಲಿ ತಲಾ ಒಂದು, ಉಪ್ಪುಂದದಲ್ಲಿ 3, ಕಿರಿಮಂಜೇಶ್ವರದಲ್ಲಿ 5, ಕೆರ್ಗಾಲಿನಲ್ಲಿ 2, ಶಿರೂರಿನಲ್ಲಿ 2ಕೇಸುಗಳು ಪತ್ತೆಯಾಗಿವೆ ಎಂದು ಬೈಂದೂರು ತಹಶೀಲ್ದಾರ್ ಬಸಪ್ಪ ತಿಳಿಸಿದರು.
ಕುಂದಾಪುರ: ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಇಂದು ಕಾಳಾವರ-2, ಬೇಳೂರು-1, ವಂಡ್ಸೆ-1, ಕೋಟೇಶ್ವರ-1, ಕಂಡ್ಲೂರು-2, ಕುಂಭಾಶಿ-1, ಗಂಗೊಳ್ಳಿ-1, ತ್ರಾಸಿ-1 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಎಲ್ಲರನ್ನು ಆಸ್ಪತ್ರೆಗೆ ಸೇರಿಸಿ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಹಶೀಲ್ದಾರ್ ಆನಂದಪ್ಪ ತಿಳಿಸಿದರು.
ಉಡುಪಿ-24: ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಇಂದು 24 ಕಡೆಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ ಎಂದು ಕಂದಾಯ ಅಧಿಕಾರಿ ತಿಳಿಸಿದ್ದಾರೆ. ಇವುಗಳಲ್ಲಿ ಅಂಜಾರು-3, ಬಡಾನಿಡಿಯೂರು, ಮೂಡುಬೆಟ್ಟು, ಪಡುತೋನ್ಸೆ, ಮೂಡನಿಡಂಬೂರು, ಕೊಡವೂರು, ಪುತ್ತೂರು, ಶಿವಳ್ಳಿ, ಮಣಿಪಾಲ ಪ್ರದೇಶಗಳು ಸೇರಿವೆ ಎಂದವರು ವಿವರಿಸಿದರು.







