ಕೊರೋನ ಸೋಂಕಿನಿಂದ ಡಾ.ಯು.ಪಿ.ಉಪಾಧ್ಯಾಯ ಮೃತ್ಯು: ದೃಢಪಡಿಸಿದ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ

ಉಡುಪಿ, ಜು.18: ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಿಧನರಾದ ಕನ್ನಡದ ಹಿರಿಯ ಭಾಷಾ ವಿಜ್ಞಾನಿ, ಜಾನಪದ ವಿದ್ವಾಂಸ ಹಾಗೂ ಸಂಶೋಧಕ ಡಾ.ಯು.ಪಿ. ಉಪಾಧ್ಯಾಯ ಅವರು ಕೋವಿಡ್‌ಗೆ ಪಾಸಿಟಿವ್ ಆಗಿದ್ದರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ದೃಢಪಡಿಸಿದ್ದಾರೆ.
88 ವರ್ಷ ಪ್ರಾಯದ ಡಾ.ಉಪಾಧ್ಯಾಯರು ಹೃದಯ ತೊಂದರೆ ಸೇರಿದಂತೆ ಬೇರೆ ಸಮಸ್ಯೆಗಳಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಕೋವಿಡ್ ಪರೀಕ್ಷೆಗೊಳ ಪಡಿಸಿದಾಗ ಅವರಲ್ಲಿ ಸೋಂಕು ಪತ್ತೆಯಾಗಿತ್ತು. ಆದರೆ ಅವರು ಶುಕ್ರವಾರ ರಾತ್ರಿ 11:30ಕ್ಕೆ ಮೃತಪಟ್ಟರೆಂದು ತಿಳಿದುಬಂದಿದೆ. ಅವರ ಅಂತ್ಯಕ್ರಿಯೆಯನ್ನು ಇಂದು ಉಡುಪಿಯಲ್ಲಿ ಕೋವಿಡ್ ಮಾರ್ಗಸೂಚಿಗಳಂತೆ ನೆರವೇರಿಸಲಾಗಿದೆ ಎಂದೂ ತಿಳಿದುಬಂದಿದೆ.
ಕೋವಿಡ್‌ಗೆ ಒಟ್ಟು 10 ಬಲಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದ ಒಟ್ಟು 10 ಮಂದಿ ಈವರೆಗೆ ಮೃತಪಟ್ಟಿದ್ದಾರೆ ಎಂದು ಡಾ.ಸೂಡ ತಿಳಿಸಿದರು. ಮೊದಲ ಮೂರು ಸಾವು ಮುಂಬೈಯಿಂದ ಊರಿಗೆ ಮರಳಿ ಬಂದವರದ್ದಾಗಿದ್ದರೆ, ಉಳಿದ ಏಳು ಮಂದಿ, ಜಿಲ್ಲೆಯ ಹೊರಗಿನಿಂದ ಬಂದು ಇಲ್ಲಿ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕಿತ ಸ್ಥಳೀಯರದ್ದಾಗಿದೆ. ಇವರಲ್ಲಿ ಮೂವರು ಕೆಎಂಸಿಯಲ್ಲಿ, ಇಬ್ಬರು ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಮೃತ ಮೃತಪಟ್ಟರೆ, ತಲಾ ಒಬ್ಬರು ನಗರದ ಮತ್ತೊಂದು ಖಾಸಗಿ ಆಸ್ಪತ್ರೆ ಹಾಗೂ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದವರು ತಿಳಿಸಿದರು.







