ರಾಜಸ್ಥಾನ ಬಿಕ್ಕಟ್ಟು: ಅಶೋಕ್ ಗೆಹ್ಲೋಟ್ ಗೆ ಪ್ರಾದೇಶಿಕ ಪಕ್ಷ ಬಿಟಿಪಿಯ ಶಾಸಕರ ಬೆಂಬಲ

ಜೈಪುರ, ಜು. 18: ರಾಜಸ್ಥಾನದ ಕಾಂಗ್ರೆಸ್ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂದೆಗೆದುಕೊಂಡಿದ್ದ ಪ್ರಾದೇಶಿಕ ಪಕ್ಷ ಭಾರತೀಯ ಟ್ರೈಬಲ್ ಪಾರ್ಟಿ ಆಫ್ ಇಂಡಿಯಾ(ಬಿಟಿಪಿ)ದ ಇಬ್ಬರು ಶಾಸಕರು ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಮತ್ತೆ ಬೆಂಬಲ ಸೂಚಿಸಿದ್ದಾರೆ.
ಭಾರತೀಯ ಟ್ರೈಬಲ್ ಪಾರ್ಟಿ ಆಫ್ ಇಂಡಿಯಾ ಬೆಂಬಲ ವ್ಯಕ್ತಪಡಿಸಿದ ಪತ್ರವನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶನಿವಾರ ಸ್ವೀಕರಿಸಿದ್ದಾರೆ. ತಮ್ಮ ರಾಜ್ಯ ಘಟಕದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಹಾಗೂ ತಮ್ಮ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿ ಬಿಟಿಪಿಯ ಇಬ್ಬರೂ ಶಾಸಕರು ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಈ ಹಿಂದೆ ಪಕ್ಷ ಕಾಂಗ್ರೆಸ್ ಗೆ ವಿಷಯಾಧಾರಿತ ಬೆಂಬಲ ನೀಡಿತ್ತು. ಕಾಂಗ್ರೆಸ್ ನಮ್ಮ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರೆ, ವಿಶ್ವಾಸಮತ ಸಾಬೀತುಪಡಿಸುವ ಸಂದರ್ಭ ಅವರು ಕಾಂಗ್ರೆಸ್ ಅನ್ನು ಬೆಂಬಲಿಸಲಿದ್ದಾರೆ ಎಂದು ಬಿಟಿಪಿಯ ರಾಜಸ್ಥಾನದ ವರಿಷ್ಠ ವೇಲಾರಾಮ್ ಗೋಘ್ರಾ ತಿಳಿಸಿದ್ದಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಸರಕಾರ ಭರವಸೆ ನೀಡಿದ ಬಳಿಕ ಕಳೆದ ತಿಂಗಳ ರಾಜ್ಯಸಭೆ ಚುನಾವಣೆಯಲ್ಲಿ ಬಿಟಿಪಿ ಕಾಂಗ್ರೆಸ್ ಗೆ ಮತ ಚಲಾಯಿಸಿತ್ತು ಎಂದು ಅವರು ಹೇಳಿದರು. ಜೈಪುರದ ಹೊಟೇಲ್ ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡ 101 ಶಾಸಕರಲ್ಲಿ ಇಬ್ಬರು ಬಿಟಿಪಿ ಶಾಸಕರು ಕೂಡ ಸೇರಿದ್ದರು. ಅವರು ಬಳಿಕ, ತಾವು ಕಾಂಗ್ರೆಸ್ ಅನ್ನು ಬೆಂಬಲಿಸುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿ ತೆರಳಿದ್ದರು.





