ಸಕ್ರಿಯ ಪ್ರಕರಣಗಳಿಗಿಂತ ಚೇತರಿಕೆ ಪ್ರಕರಣಗಳು ಅಧಿಕ: ಆರೋಗ್ಯ ಸಚಿವಾಲಯ

ಹೊಸದಿಲ್ಲಿ, ಜು. 18: ಭಾರತದ ಕೊರೋನ ಸೋಂಕಿತರ ಸಂಖ್ಯೆ 3,58,692. ಇವರಲ್ಲಿ 18,000 ಜನರು ಕಳೆದ 24 ಗಂಟೆಗಳಲ್ಲಿ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಚೇತರಿಕೆಯಾದವರ ಸಂಖ್ಯೆ 6,53,750 ಆಗಿದೆ. ಇದು 2,95,058 ಸಕ್ರಿಯ ಪ್ರಕರಣಗಳಿಗಿಂತ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ.
ಸಕ್ರಿಯ ಪ್ರಕರಣಗಳಿಗೆ ವೈದ್ಯಕೀಯ ಗಮನ ನೀಡಲಾಗಿದೆ. ಗಂಭೀರ ಪ್ರಕರಣಗಳಿಗೆ ಮನೆ ಅಥವಾ ಆಸ್ಪತ್ರೆಗಳಲ್ಲಿ ಐಸೋಲೇಶನ್ ವ್ಯವಸ್ಥೆ ಮಾಡಲಾಗಿದೆ ಎಂದು ಅದು ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 17,994 ಜನರು ಚೇತರಿಕೆಯಾಗಿದ್ದಾರೆ. ಇದರೊಂದಿಗೆ ಶೇ. 63 ಗುಣಮುಖರಾದಂತಾಗಿದೆ ಎಂದು ಸಚಿವಾಲಯ ಹೇಳಿಕೆ ತಿಳಿಸಿದೆ.
ಪರಿಣಾಮಕಾರಿ ಕೊರೋನ ನಿರ್ವಹಣೆಗೆ ಕೇಂದ್ರ ಸರಕಾರ ನೇತೃತ್ವದಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅನುಷ್ಠಾನಕ್ಕೆ ತಂದಿರುವ ಸಮಯೋಜಿತ, ಪೂರ್ವಭಾವಿ ಹಾಗೂ ಶ್ರೇಣಿಕೃತ ತಂತ್ರದ ಉಪಕ್ರಮಗಳು ಕೊರೋನಾ ಪ್ರಕರಣಗಳನ್ನು ನಿರ್ವಹಿಸಬಲ್ಲದು ಎಂಬ ಭರವಸೆ ಮೂಡಿಸಿದೆ. ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳನ್ನು ನಿರಂತರವಾಗಿ ಹೆಚ್ಚಿಸಿರುವುದರಿಂದ ಗುಣಮುಖರಾಗುತ್ತಿರವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇದುವರೆಗೆ ಒಟ್ಟು 1,34,33,742 ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ.
ಶುಕ್ರವಾರ 3,61,024 ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ಇದರೊಂದಿಗೆ ಪರೀಕ್ಷೆಯ ಸಂಖ್ಯೆ ದಶಲಕ್ಷಕ್ಕೆ 9734.6 ಏರಿಕೆ ಮಾಡಿದಂತಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿರುವ ಪ್ರದೇಶಗಳಿಗೆ ತಜ್ಞರ ತಂಡವನ್ನು ಕಳುಹಿಸುವ ಮೂಲಕ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಬೆಂಬಲ ನೀಡುತ್ತಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.







