ಖಾತೆಗಳ ಹ್ಯಾಕಿಂಗ್ ಪ್ರಕರಣ: ಟ್ವಿಟರ್ ಗೆ ಕೇಂದ್ರದ ನೋಟಿಸ್

ಹೊಸದಿಲ್ಲಿ, ಜು.18: ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಗಣ್ಯ ವ್ಯಕ್ತಿಗಳ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿರುವ ಪ್ರಕರಣದ ಕುರಿತು ಪೂರ್ಣ ವಿವರವನ್ನು ಒದಗಿಸುವಂತೆ ಹಾಗೂ ಈ ಪ್ರಕರಣದಲ್ಲಿ ಪರಿಣಾಮಕ್ಕೆ ಒಳಗಾದ ಭಾರತೀಯ ಬಳಕೆದಾರರ ಮಾಹಿತಿ ನೀಡುವಂತೆ ಸೂಚಿಸಿ ಟ್ವಿಟರ್ ಗೆ ಕೇಂದ್ರ ಸರಕಾರ ನೋಟಿಸ್ ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ದುರುದ್ದೇಶಪೂರಿತ ಟ್ವೀಟ್ ಗಳು ಹಾಗೂ ಲಿಂಕ್ ಗಳನ್ನು ಬಳಸಿದ ಭಾರತದ ಬಳಕೆದಾರರ ಸಂಖ್ಯೆ ಹಾಗೂ ಮಾಹಿತಿ ಒದಗಿಸುವಂತೆ ಮತ್ತು ತಮ್ಮ ಟ್ವಿಟರ್ ಖಾತೆಯನ್ನು ಅನಧಿಕೃತವಾಗಿ ಪರಿಶೀಲಿಸುತ್ತಿರುವ ಕುರಿತು ಬಾಧಿತ(ಪರಿಣಾಮಕ್ಕೆ ಒಳಗಾದ) ಬಳಕೆದಾರರಿಗೆ ತಿಳಿಸಲಾಗಿದೆಯೇ ಎಂದು ತಿಳಿಸುವಂತೆ ಸೂಚಿಸಿ ಭಾರತದ ಸೈಬರ್ ಸುರಕ್ಷೆಯ ನೋಡಲ್ ಏಜೆನ್ಸಿ ಸಿಇಆರ್ ಟಿ-ಐಎನ್ ನೋಟಿಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
ವಿಶ್ವದ ಪ್ರಮುಖ ಕಾರ್ಪೊರೇಟರ್ ಮುಖಂಡರು, ರಾಜಕಾರಣಿಗಳು, ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿ ಮಾಹಿತಿ ಕದಿಯಲಾಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ , ಹ್ಯಾಕರ್ ಗಳ ಕಾರ್ಯವಿಧಾನ ಮತ್ತು ಹ್ಯಾಕಿಂಗ್ ನಿಂದ ಆದ ಪರಿಣಾಮಗಳ ಬಗ್ಗೆ ಮಾಹಿತಿ ನೀಡುವಂತೆ ಟ್ವಿಟರ್ ಗೆ ತಿಳಿಸಿರುವುದಾಗಿ ಸಿಇಆರ್ಟಿ-ಇನ್ ಮೂಲಗಳು ಹೇಳಿವೆ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಡೆಮೊಕ್ರಾಟಿಕ್ನ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್, ಅಮೆಝಾನ್ ನ ಸಿಇಒ ಜೆಫ್ ಬೆಝೊಸ್, ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್, ಟೆಸ್ಲಾದ ಸಿಇಒ ಎಲಾನ್ ಮಸ್ಕ್ ಸಹಿತ ಹಲವು ಗಣ್ಯರ ಟ್ವಿಟರ್ ಖಾತೆಯನ್ನು ಬುಧವಾರ ಹ್ಯಾಕ್ ಮಾಡಲಾಗಿತ್ತು.







