ಖಾಸಗಿ ಆಸ್ಪತ್ರೆಗಳು ಕೋವಿಡ್ ಲಕ್ಷಣ ರಹಿತ ಸೋಂಕಿತರನ್ನು ದಾಖಲು ಮಾಡಿಕೊಳ್ಳುವಂತಿಲ್ಲ: ಡಾ.ಕೆ.ಸುಧಾಕರ್
![ಖಾಸಗಿ ಆಸ್ಪತ್ರೆಗಳು ಕೋವಿಡ್ ಲಕ್ಷಣ ರಹಿತ ಸೋಂಕಿತರನ್ನು ದಾಖಲು ಮಾಡಿಕೊಳ್ಳುವಂತಿಲ್ಲ: ಡಾ.ಕೆ.ಸುಧಾಕರ್ ಖಾಸಗಿ ಆಸ್ಪತ್ರೆಗಳು ಕೋವಿಡ್ ಲಕ್ಷಣ ರಹಿತ ಸೋಂಕಿತರನ್ನು ದಾಖಲು ಮಾಡಿಕೊಳ್ಳುವಂತಿಲ್ಲ: ಡಾ.ಕೆ.ಸುಧಾಕರ್](https://www.varthabharati.in/sites/default/files/images/articles/2020/07/18/251564-1595092360.jpg)
ಬೆಂಗಳೂರು, ಜು.18: ರಾಜ್ಯದಲ್ಲಿ ಕೋವಿಡ್-19 ಮಹಾಮಾರಿಯನ್ನು ಹತ್ತಿಕ್ಕಲು ಲಕ್ಷಣ ರಹಿತ ಮತ್ತು ಅಲ್ಪಲಕ್ಷಣವುಳ್ಳ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಮತ್ತು ಹೋಂ ಐಸೋಲೇಶನ್ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದ್ದು, ಖಾಸಗಿ ಆಸ್ಪತ್ರೆಗಳು ಲಕ್ಷಣರಹಿತ ಸೋಂಕಿತರನ್ನು ದಾಖಲು ಮಾಡಿಕೊಳ್ಳುವಂತಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಶನಿವಾರ ಝೂಮ್ ಆ್ಯಪ್ ಮೂಲಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಇಂದು ಮುಖ್ಯಮಂತ್ರಿ ಮಹತ್ವದ ಸಭೆ ನಡೆಸಿದ್ದು, 5,200 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲು ನಿರ್ದೇಶನ ನೀಡಿದ್ದಾರೆ ಎಂದರು.
ಒಂದು ವಾರದೊಳಗೆ ಹೆಚ್ಚುವರಿ 3,000 ಹಾಸಿಗೆಗಳು ಸೇರ್ಪಡೆಯಾಗಲಿದ್ದು, ಇಂದಿನ ಮುಖ್ಯಮಂತ್ರಿಯ ಸಭೆಗೆ ಹಾಜರಾಗದ ಖಾಸಗಿ ಆಸ್ಪತ್ರೆಗಳ ವಿರುದ್ಧ ಸರಕಾರ ಕಾನೂನು ರೀತಿ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ ಸುಧಾಕರ್, ಕೋವಿಡ್ ಮತ್ತು ಕೋವಿಡ್ ಅಲ್ಲದ ಕಾಯಿಲೆಗಳಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳೆರಡೂ ಮಕ್ಕಳ ಆರೋಗ್ಯ ಕಾಪಾಡಲು ಬದ್ಧವಾಗಿವೆ. ಶಾಲೆಗಳನ್ನು ತೆರೆದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಈಗಲೇ ಶಾಲೆ ಆರಂಭಿಸುವುದಿಲ್ಲ. ರಾಜ್ಯದಲ್ಲಿ ಇದುವರೆಗೆ 21,775 ಜನರು ಗುಣಮುಖರಾಗಿದ್ದು, ಇಂದು ರಾಜ್ಯದಲ್ಲಿ 24,909 ಆರ್ಟಿಪಿಸಿಆರ್ ಟೆಸ್ಟ್ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಈಗ 85 ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಿದ್ದು, ಮುಂದಿನ ದಿನಗಳಲ್ಲಿ ಇನ್ನೂ 25 ಲ್ಯಾಬ್ ಸ್ಥಾಪಿಸುವ ಚಿಂತನೆ ಇದೆ. ಮುಂದಿನ ದಿನಗಳಲ್ಲಿ 50 ಸಾವಿರ ಆರ್ಟಿಪಿಸಿಆರ್ ಟೆಸ್ಟ್ ಪ್ರತಿದಿನ ನಡೆಸುವ ಗುರಿ ಹೊಂದಲಾಗಿದೆ. ಇದುವರೆಗೆ 9.8 ಲಕ್ಷ ಟೆಸ್ಟ್ ನಡೆಸಲಾಗಿದ್ದು ಕೆಲವೇ ರಾಜ್ಯಗಳು ನಮಗಿಂತ ಹೆಚ್ಚು ಟೆಸ್ಟ್ ನಡೆಸಿವೆ ಎಂದು ಸುಧಾಕರ್ ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ 10 ಲಕ್ಷ ಜನಸಂಖ್ಯೆಗೆ 149 ಪರೀಕ್ಷೆ ನಡೆಸಬೇಕಾಗಿದ್ದು, ರಾಜ್ಯದಲ್ಲಿ 300 ಜನರಿಗೆ ಟೆಸ್ಟ್ ಮಾಡಲಾಗುತ್ತಿದೆ. ಇನ್ನೂ 10 ಲಕ್ಷ ಆಂಟಿಜೆನ್ ಕಿಟ್ ಗಳಿಗೆ ಆರ್ಡರ್ ನೀಡಲಾಗಿದೆ. ಟೆಸ್ಟ್ ನಡೆಸುವಲ್ಲಿ ಮೊದಲ 10 ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು ಸುಧಾಕರ್ ತಿಳಿಸಿದರು.