ಭಟ್ಕಳ ತಾಲೂಕಿನಾದ್ಯಂತ ಭಾರೀ ಮಳೆ

ಭಟ್ಕಳ: ತಾಲೂಕಿನಾದ್ಯಂತ ಕಳೆದ 3-4 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು ಶುಕ್ರವಾರ ಬೆಳಗ್ಗೆ ಅಂತ್ಯಗೊಂಡ 24 ಗಂಟೆಗಳಲ್ಲಿ 112.2 ಮಿ.ಮಿ. ಮಳೆಯಾಗಿದ್ದರೆ ಶನಿವಾರ ಬೆಳಗ್ಗೆಯ ತನಕ 70.8 ಮಿ.ಮಿ. ಮಳೆಯಾಗಿದೆ. ಜು.18ರ ತನಕ ತಾಲೂಕಿನಲ್ಲಿ ಒಟ್ಟು 2134.8 ಮಿ.ಮಿ. ಮಳೆಯಾಗಿದೆ.
ತಾಲೂಕಿನಲ್ಲಿ ಭತ್ತದ ನಾಟಿ ಕಾರ್ಯ ಬಹುತೇಕ ಕೊನೆಯ ಹಂತಕ್ಕೆ ಬಂದಿದ್ದು, ಮಳೆಯಿಂದ ಗದ್ದೆಗಳೆಲ್ಲವೂ ಜಲಾವೃತವಾಗಿದೆ.
ಶುಕ್ರವಾರ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಅನೇಕ ಭಾಗದಲ್ಲಿ ಹಾನಿಯಾಗಿದೆ. ಇವುಗಳಲ್ಲಿ ತಾಲೂಕಿನ ಮಾವಿನಕುರ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಡು ನಾರಾಯಣ ಮೊಗೇರ ಎನ್ನುವವರ ಮನೆಯ ಮೇಲೆ ತೆಂಗಿನಮರ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಹಾನಿಯ ಅಂದಾಜಿನ ಬಗ್ಗೆ ತಹಸೀಲ್ದಾರರಿಗೆ ವರದಿ ನೀಡಿದ್ದಾರೆ.
ರುಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂತ್ರವಳ್ಳಿಯಲ್ಲಿನ ಹೊಳೆ ನೀರು ತುಂಬಿ ಉಕ್ಕಿ ಹರಿದ ಪರಿಣಾಮ ರೈತರೊಬ್ಬರ ಅಡಕೆ ತೋಟಕ್ಕೆ ನೀರು ನುಗ್ಗಿ ಹಾನಿಯಾಗಿದೆ. ಬೇಂಗ್ರೆ ಮತ್ತು ಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇತ್ತೀಚೆಗಷ್ಟೇ ನಾಟಿ ಮಾಡಿದ ಬತ್ತದ ಗದ್ದೆಗಳು ಜಲಾವೃತಗೊಂಡಿದ್ದು, ಸಸಿ ಕೊಳೆಯುವ ಭೀತಿಯಲ್ಲಿ ರೈತರಿದ್ದಾರೆ. ಈ ಕುರಿತು ಈಗಾಗಲೇ ಕೃಷಿ ಇಲಾಖೆಗೆ ರೈತರು ಮಾಹಿತಿ ನೀಡಿದ್ದು ಮಳೆ ಇದೇ ರೀತಿ ಮುಂದುವರಿದರೆ ರೈತರಿಗೆ ಹಾನಿ ತಪ್ಪಿದ್ದಲ್ಲ ಎನ್ನಲಾಗಿದೆ.
ಅನೇಕ ಭಾಗದಲ್ಲಿ ಗ್ರಾಮೀಣ ರಸ್ತೆಗಳು ಕೊಚ್ಚಿ ಹೋಗಿದ್ದರೆ ಇನ್ನೂ ಅನೇಕ ಕಡೆಗಳಲ್ಲಿ ಹಲವಾರು ರಸ್ತೆಗಳು ಜಲಾವೃತವಾಗಿದೆ.









