ಬಿಬಿಎಂಪಿಯನ್ನು ಆನ್‍ಲೈನ್ ವ್ಯಾಪ್ತಿಯಿಂದ ದೂರವಿಟ್ಟಿರುವ ಹುನ್ನಾರವೇನು: ಆಪ್ ಪ್ರಶ್ನೆ
ಆರ್ ಟಿಐ ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಬೆಂಗಳೂರು, ಜು.18: ಜನ ಸಾಮಾನ್ಯರ ತೆರಿಗೆ ಹಣದಿಂದ ನಡೆಯುತ್ತಿರುವ ಸರಕಾರವೆ ನಮಗೆ ಮಾಹಿತಿ ನೀಡದೆ ವಂಚಿಸುತ್ತಿರುವುದು ಎಷ್ಟು ಸಮಂಜಸ. ಆನ್‍ಲೈನ್ ಮೂಲಕ ಆರ್‍ಟಿಐ ಅರ್ಜಿ ಸಲ್ಲಿಸಲು ಹೆಣಗಾಡಬೇಕಿದೆ, ಅಲ್ಲದೇ ಬೃಹತ್ ಭ್ರಷ್ಟಾಚಾರವನ್ನೇ ಹಾಸಿ ಹೊದ್ದಿರುವ ಬಿಬಿಎಂಪಿಯನ್ನು ಪ್ರಶ್ನೆ ಮಾಡಲು ಇದ್ದ ಮಾರ್ಗವನ್ನು ಯಾರ ಅರಿವಿಗೂ ಬಾರದಂತೆ ಬಂದ್ ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಬಿಬಿಎಂಪಿ ಜಾಲತಾಣದಲ್ಲಿ ಆರ್‍ಟಿಐ ಅರ್ಜಿ ಸಲ್ಲಿಸುವ ಬಗ್ಗೆ ಮಾತ್ರ ಮಾಹಿತಿ ನೀಡಲಾಗಿದೆ ಹೊರತು, ಅರ್ಜಿ ಸಲ್ಲಿಸಲು ಅವಕಾಶವೇ ನೀಡಿಲ್ಲ. ಹಾಗೂ ಮಾಹಿತಿ ಹಕ್ಕು ಜಾಲತಾಣದಲ್ಲೂ ಬಿಬಿಎಂಪಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ. ಜತೆಗೆ ಅನೇಕ ಇಲಾಖೆಗಳು ಕಣ್ಣಿಗೆ ಕಾಣದಂತೆ ಮಾಯವಾಗಿವೆ ಎಂದು ಆಮ್ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ದೂರಿದ್ದಾರೆ.
ಕೊರೋನ ಸಂಕಷ್ಟದ ಸಮಯವನ್ನೇ ಹಣ ಮಾಡುವ ಮಾರ್ಗವನ್ನಾಗಿಸಿಕೊಂಡಿರುವ ಅಧಿಕಾರಿಗಳನ್ನು ರಕ್ಷಿಸಿ ‘ಪರ್ಸೆಂಟೇಜ್’ ಪಡೆಯುತ್ತಿರುವ, ಚಿಕ್ಕಪುಟ್ಟ ಮಾಹಿತಿಗಳನ್ನೂ ಮುಚ್ಚಿಟ್ಟು ಕೊಳ್ಳೆ ಹೊಡೆಯುತ್ತಿರುವ ಅಧಿಕಾರಿಗಳ ರಕ್ಷಣೆಗೆ ನಿಂತಿರುವ ಭ್ರಷ್ಟ ಸರಕಾರವೂ ಇದರಲ್ಲಿ ಬಾಗಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಕೂಡಲೆ ಬಿಬಿಎಂಪಿ ಜಾಲತಾಣದಲ್ಲಿ ಆರ್‍ಟಿಐ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಜಗದೀಶ್ ವಿ.ಸದಂ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.







